ಮಹಾರಾಷ್ಟ್ರ: ಲಾತೂರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಔಸಾದ ಬಿಜೆಪಿ ಶಾಸಕ ಅಭಿಮನ್ಯು ಪವಾರ್ ಅವರ ಪುತ್ರ ಸೇರಿದಂತೆ 25 ಜೋಡಿ ಬುಧವಾರ (ನಿನ್ನೆ) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಏಕನಾಥ್ ಶಿಂಧೆ, ಬಡವರ ಅನುಕೂಲಕ್ಕಾಗಿ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸುತ್ತಿರುವ ಬಿಜೆಪಿ ಶಾಸಕರ ಪ್ರಯತ್ನವನ್ನು ಶ್ಲಾಘಿಸಿದರು. ಇದರ ಜೊತೆಗೆ, ಇನ್ನುಳಿದ ನಾಯಕರು ಸಹ ಇದೇ ರೀತಿ ಮಾದರಿಯಾಗುಬೇಕು ಎಂದು ಕಿವಿಮಾತು ಹೇಳಿದರು.
ಅಭಿಮನ್ಯು ಪವಾರ್ ಅವರು ಉಟಗೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್, ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದು, ದಂಪತಿಗಳನ್ನು ಆಶೀರ್ವದಿಸಿದರು.
ಇದನ್ನೂ ಓದಿ :ಘಾಜಿಯಾಬಾದ್ನಲ್ಲಿ ಬೃಹತ್ ಸಾಮೂಹಿಕ ವಿವಾಹ : ದಾಂಪತ್ಯ ಜೀವನಕ್ಕೆ ಕಾಲಿಟ್ಟ 3003 ಜೋಡಿಗಳು
ಕಳೆದ ಫೆಬ್ರವರಿ ತಿಂಗಳ 3ನೇ ತಾರೀಖಿನಂದು ಘಾಜಿಯಾಬಾದ್ನ ನೆಹರು ಪಾರ್ಕ್ನಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸುಮಾರು 3003 ಜೋಡಿಗಳು ಭಾಗವಹಿಸಿದ್ದು, ಹಿಂದೂ ಸಮುದಾಯದ 1,850 ಮತ್ತು ಮುಸ್ಲಿಂ ಸಮುದಾಯದ 1,147, ಬೌದ್ಧ ಸಮುದಾಯದ 3 ಮತ್ತು ಸಿಖ್ ಸಮುದಾಯದ 3 ಜೋಡಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದರು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ.ಕೆ.ಸಿಂಗ್, ರಾಜ್ಯ ಸಚಿವರು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗಿಯಾಗಿದ್ದು, ನವ ಜೋಡಿಗಳಿಗೆ ಶುಭ ಹಾರೈಸಿದರು.