ನವದೆಹಲಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ರಾಷ್ಟ್ರದಲ್ಲಿ ಸುದ್ದಿಯಾಗಿತ್ತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ರಮೇಶ್ ಕುಮಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸದನದಲ್ಲಿ 'ರೇಪ್'ಹೇಳಿಕೆ ವಿವಾದ.. ಕೆ.ಆರ್.ರಮೇಶ್ ಕುಮಾರ್ ಅಮಾನತಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒತ್ತಾಯ ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, ವಿಧಾನಸೌಧದೊಳಗೆ ಕಾಂಗ್ರೆಸ್ ನಾಯಕರೊಬ್ಬರು ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಲಡ್ಕಿ ಹೂ, ಲಡ್ ಸಕ್ತಿ ಹೂ ಎಂಬ ಘೋಷಣೆಗಳನ್ನು ಕೂಗುವ ಮೊದಲು ಕಾಂಗ್ರೆಸ್ ರಮೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರಮೇಶ್ ಕುಮಾರ್ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ, ಕರ್ನಾಟಕದ ಅಧಿವೇಶನದಲ್ಲಿ ಸ್ಪೀಕರ್ ಮತ್ತು ಹಿರಿಯ ಕಾಂಗ್ರೆಸ್ ಶಾಸಕರ ನಡುವೆ ಹೆಚ್ಚು ಆಕ್ಷೇಪಾರ್ಹ ಮತ್ತು ಸಂವೇದನಾಶೀಲತೆಯ ಮಾತುಗಳ ವಿನಿಮಯವನ್ನು ಕಾಂಗ್ರೆಸ್ ಪಕ್ಷವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಸ್ಪೀಕರ್ ಮತ್ತು ಹಿರಿಯ ಶಾಸಕರು ಮಾದರಿಯಾಗಿರಬೇಕು. ಸ್ವೀಕಾರಾರ್ಹವಲ್ಲದ ನಡವಳಿಕೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರವಾದಾಗ ಅದನ್ನು ತಡೆಯಬೇಕು, ಇಲ್ಲದಿದ್ದರೆ ಆನಂದಿಸಬೇಕು ಎಂದು ನಿನ್ನೆ ವಿಧಾನಸಭೆ ಕಲಾಪದಲ್ಲಿ ರಮೇಶ್‌ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಎಚ್ಚೆತ್ತ ರಮೇಶ್ ಕುಮಾರ್ ಇಂದು ಕಲಾಪದಲ್ಲಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ:ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೇ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್ ಕುಮಾರ್