ನಿಜಾಮಾಬಾದ್(ತೆಲಂಗಾಣ):ಮಾರ್ಫಿಂಗ್ ವಿಡಿಯೋಗಳ ಮೂಲಕ ಸೈಬರ್ ಅಪರಾಧಿಗಳ ಬೆದರಿಕೆ ದಿನೇದಿನೇ ಹೆಚ್ಚುತ್ತಿದೆ. ಇದರಿಂದ ಭಯಗೊಂಡಿರುವ ಸಂತ್ರಸ್ತರು ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ. ಸೈಬರ್ ಕ್ರಿಮಿನಲ್‌ಗಳು ಅಮಾಯಕರಿಗೆ ಅಪಾರ ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತಿದ್ದಾರೆ. ಮಾತ್ರವಲ್ಲ, ಅಮೂಲ್ಯ ಪ್ರಾಣಗಳನ್ನೂ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇಂಥದೇ ಪ್ರಕರಣದಲ್ಲಿ ಕಿರುಕುಳ ತಡೆಯಲಾರದೆ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ, ನಿಜಾಮಾಬಾದ್ ನಗರ ಕ್ಷೇತ್ರದ ಅಭ್ಯರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರ ಪ್ರಕಾರ, ನಿಜಾಮಾಬಾದ್ ಜಿಲ್ಲಾ ಕೇಂದ್ರದ ಸಾಯಿನಗರದ ನಿವಾಸಿ ಕನ್ನಯ್ಯ ಗೌಡ (35) ಸಗಟು ತರಕಾರಿ ವ್ಯಾಪಾರ ಮಾಡಿಕೊಂಡು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ನಿಜಾಮಾಬಾದ್ ನಗರ ಕ್ಷೇತ್ರದಿಂದ ಅಲಯನ್ಸ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪಕ್ಷದ ಪರವಾಗಿ ಕಣಕ್ಕಿಳಿದಿದ್ದರು. ಇತ್ತೀಚೆಗಷ್ಟೇ ಅಪರಿಚಿತ ದುಷ್ಕರ್ಮಿಗಳು ಅವರ ಮೊಬೈಲ್ ಹ್ಯಾಕ್ ಮಾಡಿದ್ದರು. ದಾಳಿಕೋರರು ಸಂತ್ರಸ್ತನ ಫೋಟೋಗಳನ್ನು ಬದಲಾಯಿಸಿ ಅವರ ಫೋನ್‌ಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾರೆ. ಹಣ ಕಳುಹಿಸದಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದರು.