ಚೆನ್ನೈ(ತಮಿಳುನಾಡು):ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಂ.ಕೆ ಸ್ಟಾಲಿನ ನೇತೃತ್ವದ ಡಿಎಂಕೆ ಭರ್ಜರಿ ಗೆಲುವು ಸಾಧಿಸಿದ್ದು, ದಶಕದ ಬಳಿಕ ಸರ್ಕಾರ ರಚನೆಗೆ ಸಜ್ಜಾಗಿದೆ. ಇದೇ ಮೇ 7ರಂದು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ.
ತಮಿಳುನಾಡಿನಲ್ಲಿ ಉದಯಿಸಿದ 'ಸೂರ್ಯ'.. ಮೇ 7ರಂದು ಸಿಎಂ ಆಗಿ ಸ್ಟಾಲಿನ್ ಪದಗ್ರಹಣ - ನೂತನ ಸಿಎಂ ಆಗಿ ಸ್ಟಾಲಿನ್
ತಮಿಳುನಾಡಿನಲ್ಲಿ ದಶಕದ ಬಳಿಕ ಡಿಎಂಕೆ ಪಕ್ಷ ಬಹುಮತ ಪಡೆದಿದ್ದು, ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಇದೇ ಮೇ 7ರಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಎಂ.ಕೆ. ಸ್ಟಾಲಿನ್ ಪದಗ್ರಹಣ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ.
234 ಕ್ಷೇತ್ರಗಳ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ 133 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚುನಾವಣೆಯಲ್ಲಿ ಸೋಲು ಕಂಡಿರುವ ಎಐಎಡಿಎಂಕೆ ಪಕ್ಷದ ಹಿಂದಿನ ಸಿಎಂ ಪಳನಿಸ್ವಾಮಿ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೇ 7ರಂದು ರಾಜಭವನದಲ್ಲಿ ಮಧ್ಯಾಹ್ನ 1:30ಕ್ಕೆ ಸರಳ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ನೂತನ ಸಿಎಂ ಆಗಿ ಸ್ಟಾಲಿನ ಅಧಿಕಾರ ಸ್ವೀಕರಿಸಲಿದ್ದಾರೆ. ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಇಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇದಕ್ಕೂ ಮೊದಲು ನಡೆದ ಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.