ಐಝ್ವಾಲ್ (ಮಿಜೋರಾಂ):ಜನಸಂಖ್ಯೆಯಲ್ಲಿ ಚೀನಾ ಬಳಿಕ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತ ಇದರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ವೇಳೆ ಮಿಜೋರಾಂ ರಾಜ್ಯವು ಜನಸಂಖ್ಯೆ ಹೆಚ್ಚಿಸಲು ವಿಶೇಷ ಆಫರ್ ನೀಡುತ್ತಿದೆ. ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಇಲ್ಲಿನ ಸಚಿವರೊಬ್ಬರು ಘೋಷಿಸಿದ್ದಾರೆ.
ವಿಶ್ವ ಅಪ್ಪಂದಿರ ದಿನವಾದ ಮೊನ್ನೆ ಭಾನುವಾರದಂದು ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಹೀಗೆ ಘೋಷಿಸಿ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ. ಆದರೆ ಇವರ ಈ ಹೇಳಿಕೆ ಹಿಂದೆ ಕಾರಣವೊಂದಿದೆ. ಅದೇನೆಂದರೆ, ರಾಜ್ಯದ ಮಿಜೋ ಎಂಬ ಬುಡಕಟ್ಟು ಸಮುದಾಯದಲ್ಲಿ ಬಂಜೆತನ ಪ್ರಮಾಣ ಹೆಚ್ಚುತ್ತಿದ್ದು, ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ತಮ್ಮ ಐಝ್ವಾಲ್ ಈಸ್ಟ್ -2 ವಿಧಾನಸಭಾ ಕ್ಷೇತ್ರದೊಳಗಿರುವ ಮಿಜೋ ಸಮುದಾಯದ ಜನಸಂಖ್ಯೆ ಹೆಚ್ಚಿಸಲು ಸಚಿವರು ಹೀಗೆ 1 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.