ಕರ್ನಾಟಕ

karnataka

ETV Bharat / bharat

ಮಿಜೋರಂ ಚುನಾವಣೆ: 27 ಸ್ಥಾನಗಳಲ್ಲಿ ಗೆದ್ದು ಬೀಗಿದ ಝಡ್​ಪಿಎಂ, ಆಡಳಿತಾರೂಢ ಎಂಎನ್​ಎಫ್​ಗೆ ಸೋಲು - Chief Minister Zoramthanga resigned

ಮಿಜೋರಂ ಚುನಾವಣಾ ಫಲಿತಾಂಶ ಮುಗಿದಿದ್ದು, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ 27 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಸಿಎಂ ಝೋರಂತಂಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಿಜೋರಂ ಚುನಾವಣೆ
ಮಿಜೋರಂ ಚುನಾವಣೆ

By ETV Bharat Karnataka Team

Published : Dec 4, 2023, 9:46 PM IST

ಐಜ್ವಾಲ್ (ಮಿಜೋರಾಂ):ಪ್ರಾದೇಶಿಕ ಪಕ್ಷಗಳ ಅಧಿಪತ್ಯದ ಮಿಜೋರಂ ವಿಧಾನಸಭೆಯಲ್ಲಿ ನಿರೀಕ್ಷೆಯಂತೆ ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಝಡ್​ಪಿಎಂ) ಭರ್ಜರಿ ಗೆಲುವು ಸಾಧಿಸಿದೆ. 40 ಸ್ಥಾನಗಳ ಪೈಕಿ 27 ರಲ್ಲಿ ಗೆದ್ದು ಬೀಗಿದ ಮಾಜಿ ಐಪಿಎಸ್​ ಅಧಿಕಾರಿ ಲಾಲ್ದುಹೋಮಾ ಅವರ ZPM ಅಧಿಕಾರ ಹಿಡಿಯಲು ಸಜ್ಜಾಗಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್​ಎಫ್​) ಹೀನಾಯ ಸೋಲು ಕಂಡು 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು.

ಗಮನಾರ್ಹ ಸಂಗತಿ ಎಂದರೆ, ಎಂಎನ್​ಎಫ್​ ಪಕ್ಷ ರಾಜ್ಯವನ್ನು ಕಳೆದುಕೊಳ್ಳುವುದಲ್ಲದೇ, ಸಿಎಂ ಆಗಿರುವ ಝೋರಂತಂಗ ಅವರು ತಮ್ಮ ಕ್ಷೇತ್ರವಾದ ಪೂರ್ವ ಐಜ್ವಾಲ್​ನಲ್ಲಿ ಝಡ್​ಪಿಎಂ ಅಭ್ಯರ್ಥಿ ಲಾಲ್ತನ್‌ಸಂಗ ಅವರಿಂದ ಸೋಲಿಸಲ್ಪಟ್ಟರು. ಇದರಿಂದ ತೀವ್ರ ಮುಖಭಂಗಕ್ಕೀಡಾದ ಸಿಎಂ ಫಲಿತಾಂಶ ಘೋಷಣೆಯ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪತ್ರವನ್ನು ರಾಜ್ಯಪಾಲ ಡಾ.ಹರಿಬಾಬು ಕಂಬಂಪತಿ ಅವರಿಗೆ ಸಲ್ಲಿಸಿದರು.

ಸಿಎಂ, ಡಿಸಿಎಂ, 9 ಸಚಿವರಿಗೆ ಸೋಲು:ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್​ಎಫ್​ ಧೂಳಿಪಟವಾಗಿದೆ. ಪಕ್ಷದ ಅಧ್ಯಕ್ಷ ಮತ್ತು ಸಿಎಂ ಆಗಿದ್ದ ಝೋರಂತಂಗ ಅವರು ಸೋಲು ಕಂಡಿದ್ದಾರೆ. ಇದರ ಜೊತೆಗೆ ಡಿಸಿಎಂ ತಾವ್ಲುಯಾ ಅವರು ZPM ಅಭ್ಯರ್ಥಿ ಚುವಾನಾವ್ಮಾ ವಿರುದ್ಧ ಸೋತರೆ, 11 ರಲ್ಲಿ 9 ಸಚಿವರು ಪರಾಜಯವಾಗಿದ್ದಾರೆ.

ಇನ್ನು ಜನರ ತೀರ್ಪನ್ನು ಒಪ್ಪಿಕೊಂಡಿರುವ ನಿರ್ಗಮಿತ ಸಿಎಂ ಝೋರಂತಂಗ ಅವರು ಸೋಮವಾರ ರಾಜಭವನದಲ್ಲಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಆಡಳಿತ ವಿರೋಧಿ ಅಲೆ ಮತ್ತು ನನ್ನ ಕಾರ್ಯದಿಂದಾಗಿ ತೃಪ್ತರಾಗದ ಜನರು ಪಕ್ಷವನ್ನು ಸೋಲಿಸಿದ್ದಾರೆ. ಜೊತೆಗೆ ನನ್ನ ಕ್ಷೇತ್ರದಲ್ಲೂ ಸೋಲಾಗಿದೆ. ನಾನು ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಝಡ್​ಪಿಎಂ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಲಿ. ನಮ್ಮ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಏಳಲು ಕೋವಿಡ್​ ಕೂಡ ಕಾರಣ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು:ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಮಿಜೋರಂನಲ್ಲಿ ಕಮಾಲ್​ ಮಾಡಲು ಸಾಧ್ಯವಾಗಿಲ್ಲ. ಪುಟ್ಟ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳೇ ಬಲಾಢ್ಯವಾಗಿದ್ದು, ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಅದರಲ್ಲೂ ಎನ್​ಡಿಎ ಭಾಗವಾಗಿದ್ದ ಎಂಎನ್​ಎಫ್​ ಸೋಲು ಕಂಡಿರುವುದು ದೊಡ್ಡ ಹಿನ್ನಡೆಯಾಗಿದೆ.

1987 ರಲ್ಲಿ ಮಿಜೋರಾಂ ಪೂರ್ಣ ರಾಜ್ಯ ಸ್ಥಾನಮಾನ ಪಡೆದ ಬಳಿಕ ಕಾಂಗ್ರೆಸ್ ಮತ್ತು ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷಗಳು ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಇದೀಗ ಹೊಸದಾಗಿ ಝಡ್​ಪಿಎಂ ಪಕ್ಷ ಅಧಿಕಾರದ ಗದ್ದುಗೆ ಹತ್ತಿದೆ.

ಇದನ್ನೂ ಓದಿ:ಮಿಜೋರಾಂ ಮತ ಎಣಿಕೆ: ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು; ಸಿಎಂ, ಡಿಸಿಎಂಗೆ ಹಿನ್ನಡೆ

ABOUT THE AUTHOR

...view details