ಹೈದರಾಬಾದ್:ಕಳೆದ ಮೂರು ದಿನಗಳಿಂದ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿವೆ ಎಂಬ ಅಂಶದಿಂದ ಮಾತ್ರ ದೇಶದಲ್ಲಿ 2ನೇ ಅಲೆ ಎಷ್ಟು ಅಪಾಯಕಾರಿ ಎಂದು ಅಳೆಯಬಹುದು. ಪ್ರತಿದಿನ 2 ಲಕ್ಷ ಹೊಸ ಪ್ರಕರಣಗಳು ದಾಖಲಾಗುವುದು ಅಂದರೆ ಅದರರ್ಥ ಬೇರೆಯದ್ದಾಗುತ್ತದೆ. ಅಂತೆಯೇ ಕೋವಿಡ್ -19 ಸಾವುಗಳ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಿದೆ.
ಕೇಂದ್ರ ಸರ್ಕಾರ ಪ್ರತಿದಿನ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಪ್ರತಿದಿನ 1000ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ಡೇಟಾ ಪ್ರಶ್ನಾರ್ಹವಾಗಿದೆ. ಕೋವಿಡ್ -19 ಸಾವುಗಳ ಬಗ್ಗೆ ವಿವಿಧ ರಾಜ್ಯಗಳಿಂದ ಬರುವ ಅಂಕಿ-ಅಂಶಗಳ ಮೇಲೆ ಪ್ರಶ್ನೆ ಹುಟ್ಟುಕೊಂಡಿದೆ. ಶವ ಸಂಸ್ಕಾರದ ಮೈದಾನದಲ್ಲಿ ಸುಡಲಾಗುತ್ತಿರುವ ಶವಗಳ ಸಂಖ್ಯೆಗೂ ಮತ್ತು ಸರ್ಕಾರ ಬಿಡುಗಡೆ ಮಾಡುತ್ತಿರುವ ಕೋವಿಡ್-19 ಸಾವುಗಳ ಮಾಹಿತಿ ನಡುವೆ ಹೊಂದಾಣಿಕೆಯಾಗದಿರುವುದು ಹಲವು ಕಡೆ ಪ್ರಶ್ನೆ ಮೂಡಲು ಕಾರಣವಾಗಿದೆ.
ಇಂತಹ ವರದಿಗಳು ಹೊರಬರುತ್ತಿದ್ದಂತೆ ಈಟಿವಿ ಭಾರತ್ ಗ್ರೌಂಡ್ ರಿಪೋರ್ಟ್ಗೆ ಇಳಿದಿದ್ದು, ದೇಶದ ನಾನಾ ಭಾಗಗಳ ಡೇಟಾ ಸಂಗ್ರಹಿಸಿದೆ. ಅಲ್ಲದೆ ಮಹಾರಾಷ್ಟ್ರ ಹಾಗೂ ಗುಜರಾತ್‌ನ ನೈಜ ಚಿತ್ರಣ ಹೊರತರುವ ಪ್ರಯತ್ನ ಮಾಡಿದೆ.
ಈ ವರದಿಯ ಮೂಲಕ ಕೋವಿಡ್ -19 ಸಾವುಗಳಿಗೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ಹೇಗೆ ಮತ್ತು ಏಕೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಈಟಿವಿ ಭಾರತ್‌ನ ಮೊದಲ ವರದಿಯಲ್ಲಿ ನಾವು ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ದೆಹಲಿಯ ವಾಸ್ತವತೆ ಬಗ್ಗೆ ಚರ್ಚಿಸಿದ್ದೇವೆ. ಈ ರಾಜ್ಯಗಳಲ್ಲಿ ಒಂದೆರಡು ಶವ ಸಂಸ್ಕಾರದ ಮೈದಾನಗಳ ದತ್ತಾಂಶವು ಸರ್ಕಾರದ ವರದಿಯಲ್ಲಿ ನ್ಯೂನತೆ ಉಂಟಾಗಿರುವ ಕುರಿತು ಬೆಳಕು ಚೆಲ್ಲುತ್ತಿದೆ. ಅಲ್ಲದೆ ಮಹಾರಾಷ್ಟ್ರದ ಅಹ್ಮದ್‌ನಗರ ಮತ್ತು ಗುಜರಾತ್‌ನ ಭಾವನಗರದಲ್ಲಿ ಕೋವಿಡ್ -19 ಸಾವುಗಳ ಸಂಖ್ಯೆಯ ಬಗ್ಗೆ ಏಕೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
ಮಹಾರಾಷ್ಟ್ರ
ಕೊರೊನಾ ವೈರಸ್ನ 2ನೇ ಅಲೆಯು ದೇಶದಲ್ಲಿ ಅಧಿಕ ಹಾನಿಯನ್ನುಂಟುಮಾಡುತ್ತಿದೆ. ಆದರೆ ಕೊರೊನಾ ಪರಿಣಾಮವು ಮಹಾರಾಷ್ಟ್ರದಲ್ಲಿ ಸಾಕಷ್ಟು ದುರ್ಬಲಗೊಳ್ಳುತ್ತಿದೆ. ವೈರಸ್ನ ಮೊದಲ ಅಲೆಯಂತೆ 2ನೇ ಅಲೆ ಸಹ ಮಹಾರಾಷ್ಟ್ರದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಮಹಾರಾಷ್ಟ್ರದಲ್ಲಿ ಪ್ರತಿದಿನ ಸರಾಸರಿ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 63 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 398 ಸಾವುಗಳು ವರದಿಯಾಗಿವೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಪ್ರತಿದಿನ ಬಿಡುಗಡೆ ಮಾಡುವ ಹೊಸ ಕೊರೊನಾ ಪ್ರಕರಣಗಳು ಮತ್ತು ಸಾವಿನ ಅಂಕಿ ಅಂಶಗಳಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ.
ಮಹಾರಾಷ್ಟ್ರವು ಕೊರೊನಾ ಪ್ರಕರಣ ಹಾಗೂ ಸಾವುಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿ ಉಂಟಾಗುತ್ತಿರುವ ಸಾವಿನ ಸಂಖ್ಯೆಗಳ ಬಗ್ಗೆಯೂ ಪ್ರಶ್ನೆ ಎದ್ದಿದೆ. ಇಲ್ಲಿನ ಸಾವಿನ ಸಂಖ್ಯೆ ಕುರಿತು ಪ್ರಶ್ನೆ ಮೂಡಲು ಕಾರಣ ಏನೆಂಬುದನ್ನು ನಾವು ತಿಳಿಸುತ್ತೇವೆ.
ಏಪ್ರಿಲ್ 9ರಂದು ಅಹ್ಮದ್‌ನಗರದ ಅಮರ್‌ಧಾಮ್ ಶವಾಗಾರದಲ್ಲಿ ಮೃತಪಟ್ಟ 49 ಮಂದಿ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗಿತ್ತು. ಆದರೆ ಏಪ್ರಿಲ್ 9ರಂದು ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಅಹ್ಮದ್‌ನಗರ ಜಿಲ್ಲೆಯಲ್ಲಿ ಕೊರೊನಾದಿಂದ ಕೇವಲ ಮೂವರು ಸಾವನ್ನಪ್ಪಿದ್ದಾರೆ. ಏಪ್ರಿಲ್ 9ರಂದು, ಮಹಾರಾಷ್ಟ್ರದಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಧಿಕೃತ ಸಂಖ್ಯೆ 301 ಆಗಿತ್ತು. ಈಟಿವಿ ಭಾರತ್ ಗ್ರೌಂಡ್ ರಿಪೋರ್ಟ್ನಲ್ಲಿ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿನ ಕೇವಲ ಒಂದು ಶವಾಗಾರದ ಚಿತ್ರಣ ಮಾತ್ರ ತೋರಿಸಲಾಯಿತು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಹಾರಾಷ್ಟ್ರದಲ್ಲಿ ಪ್ರತಿ 24 ಗಂಟೆಗಳಿಗೊಮ್ಮೆ 60 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಕೇಸ್ಗಳು ವರದಿಯಾಗುತ್ತವೆ.