ನಾರಾಯಣ ಪೇಟ (ತೆಲಂಗಾಣ) : ಮೊಹಮ್ಮದ್ ಡ್ಯಾನಿಷ್ ಹೆಸರಿನ ಬಾಲಕನೊಬ್ಬ ತನ್ನ 6ನೇ ವಯಸ್ಸಿನಲ್ಲಿ ತೆಲಂಗಾಣದ ನಾರಾಯಣ ಪೇಟದಿಂದ ಕಾಣೆಯಾಗಿದ್ದ. ಹೀಗೆ ಕಾಣೆಯಾದವ ಮುಂಬೈನ ಸಾಂತ್ವನ ಕೇಂದ್ರವೊಂದರಲ್ಲಿ ದಾಖಲಾಗಿದ್ದ. ಸಾಂತ್ವನ ಕೇಂದ್ರದ ಸಿಬ್ಬಂದಿಯು ಬಾಲಕನ ಆಧಾರ್ ಬಯೋಮೆಟ್ರಿಕ್ ಬಳಸಿ ಆತನ ಊರು, ವಿಳಾಸ ಹಾಗೂ ಪಾಲಕರ ಹೆಸರು ಪತ್ತೆ ಮಾಡಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಫಲ ಸಿಕ್ಕಿರಲಿಲ್ಲ.
ಏನೇ ಮಾಡಿದರೂ ಬಾಲಕನ ಪೋಷಕರು ಯಾರು ಎಂಬುದು ಗೊತ್ತಾಗಿರಲಿಲ್ಲ. ಇದಾಗಿ ಸುಮಾರು 9 ವರ್ಷಗಳ ನಂತರ ಬಾಲಕ 15 ವರ್ಷದೊಳಗಿನವರ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ. ಈ ಹಂತದಲ್ಲಿ ಬಾಲಕನ ಪಾಲಕರನ್ನು ಹೇಗಾದರೂ ಮಾಡಿ ಹುಡುಕಲೇಬೇಕೆಂದು ಹಟಕ್ಕೆ ಬಿದ್ದರು ತಂಡದ ಮ್ಯಾನೇಜರ್ಗಳು.
ಡ್ಯಾನಿಶ್ ಪ್ರಸ್ತುತ 15 ವರ್ಷ ವಯಸ್ಸಿನವರಾಗಿದ್ದು, ಇತ್ತೀಚೆಗೆ 15 ವರ್ಷದೊಳಗಿನವರ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಅವನ ಸೇರ್ಪಡೆಯನ್ನು ಪೂರ್ಣಗೊಳಿಸಲು, ಸಂಬಂಧಪಟ್ಟ ಅಧಿಕಾರಿಗಳು ಅವನ ಪಾಲಕರು ಮತ್ತು ಸ್ಥಳೀಯ ವಿಳಾಸವನ್ನು ಕಂಡುಹಿಡಿಯಬೇಕಾಗಿತ್ತು. ಬಾಲಕ ಮುಂಚೆ ಇದ್ದ ಸಾಂತ್ವನ ಕೇಂದ್ರದವರು ಸಹ ಈ ಮಾಹಿತಿ ನೀಡಲಿಲ್ಲ. ಕೊನೆಗೆ ಫುಟ್ಬಾಲ್ ತಂಡದವರು ಆತನ ಇತ್ತೀಚಿನ ಫಿಂಗರ್ಪ್ರಿಂಟ್ ಪರೀಕ್ಷೆ ಮಾಡಿದಾಗ ಬಾಲಕನ ಪೋಷಕರ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳನ್ನು ನೀಡಿತು.
ಒಂಬತ್ತು ವರ್ಷಗಳಿಂದ ತಿಳಿಯದ ವಿಚಾರಗಳು ಈಗ ಗೊತ್ತಾಗಿದ್ದವು. ಬಾಲಕ ಡ್ಯಾನಿಷ್ ತೆಲಂಗಾಣ ಮೂಲದವನಾಗಿದ್ದು, ನಾರಾಯಣಪೇಟ ಜಿಲ್ಲಾ ಕೇಂದ್ರದ ಬಹಾರ್‌ಪೇಟ್‌ನ ಮೊಹಮ್ಮದ್ ಮೊಯಿಜ್ ಮತ್ತು ಶಬಾನಾ ದಂಪತಿಯ ಪುತ್ರನಾಗಿದ್ದಾನೆ ಎಂದು ತಿಳಿದುಬಂದಿತು. ಇವಾಗ ಬಾಲಕನ ಜೀವನ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿತ್ತು. ಒಂಬತ್ತು ವರ್ಷಗಳಿಂದ ಮಗನನ್ನು ಹುಡುಕುತ್ತಿದ್ದ ಪೋಷಕರು ಕೊನೆಗೂ ಡ್ಯಾನಿಷ್ನನ್ನು ನೋಡುವ ಸಮಯ ಬಂದಿತ್ತು.