ಗುವಾಹಟಿ (ಅಸ್ಸೋಂ): ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿರುವ ಅಸ್ಸೋಂದ ಮಹಿಳೆಯೊಬ್ಬರು ಪಾಕಿಸ್ತಾನದ ಜೈಲು ಸೇರಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪಾಕಿಸ್ತಾನದ ಅಪರಿಚಿತ ಸಂಖ್ಯೆಯಿಂದ ಮಹಿಳೆಯ ತಾಯಿಗೆ ವಾಟ್ಸಾಪ್ ಕರೆ ಬಂದಿದೆ. ಇದರ ಆಧಾರದ ಮೇಲೆ ಸಂತ್ರಸ್ತೆಯ ತಾಯಿ ನ್ಯಾಯ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆಯು ನಾಳೆ (ಶುಕ್ರವಾರ) ನಡೆಯಲಿದೆ.
ಪಾಕಿಸ್ತಾನದ ಜೈಲು ಸೇರಿರುವ ಮಹಿಳೆಯನ್ನು ವಹೀದಾ ಬೇಗಂ ಎಂದು ಗುರುತಿಸಲಾಗಿದೆ. 2022ರ ನವೆಂಬರ್ 10ರಿಂದ ವಹೀದಾ ಕಾಣೆಯಾಗಿದ್ದರು. ಇದರ ನಡುವೆ ಎಂದರೆ ನವೆಂಬರ್ 30ರಂದು ತಾಯಿ ಆರಿಫಾ ಖಾತುನ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಈ ವೇಳೆ ವಹೀದಾ ಬೇಗಂ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ ಎಂಬುದಾಗಿ ಈ ಅಪರಿಚಿತ ಕರೆ ಮಾಡಿದವರು ಆರಿಫಾ ಅವರಿಗೆ ತಿಳಿಸಿದ್ದಾರೆ. ಪಾಕಿಸ್ತಾನಿ ವಕೀಲರೊಬ್ಬರು ಈ ಕರೆ ಮಾಡಿದ್ದರು ಎಂದು ನಂತರ ತಿಳಿದು ಬಂದಿದೆ.
ಆಸ್ತಿ ಮಾರಾಟ ಮಾಡಿದ್ದ ವಾಹೀದಾ: ಅಸ್ಸೋಂದ ನಾಗಾಂವ್ ನಿವಾಸಿದ ವಹೀದಾ ಬೇಗಂ ತನ್ನ ಪತಿ ಮೊಹಮ್ಮದ್ ಮೊಹ್ಸಿನ್ ಖಾನ್ ಸಾವಿನ ನಂತರ ಆಸ್ತಿಯನ್ನು ಮಾರಾಟ ಮಾಡಿದ್ದರು. ಇದರಿಂದ 1.60 ಕೋಟಿ ರೂಪಾಯಿ ಹಣ ಬಂದಿತ್ತು. ಆದರೆ, ಇದಾದ ನಂತರದಿಂದ ವಹೀದಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂತ್ರಸ್ತೆಯ ಕುಟುಂಬದವರು ನಾಗಾಂವ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪಾಕ್ನಲ್ಲಿ ನ.25ರಂದು ವಾಹೀದ್ ಬಂಧನ:ನಾಗಾಂವ್ನಿಂದ ಕಾಣೆಯಾದ 15 ದಿನಗಳಲ್ಲೇ ವಾಹೀದಾ ಬೇಗಂ ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಪಾಕಿಸ್ತಾನಿ ವಕೀಲರೊಬ್ಬರು ವಾಟ್ಸಾಪ್ ಮೂಲಕ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ನ.25ರಂದು ವಹೀದಾ ಬೇಗಂ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ. ಈ ಬಗ್ಗೆ ಲೀಗಲ್ ನೋಟಿಸ್ ಕೂಡ ಕಳುಹಿಸಲಾಗಿದ್ದು, ಅದರ ಪ್ರತಿಯನ್ನು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಕಳುಹಿಸಲಾಗಿದೆ ಎಂದು ಪಾಕ್ ವಕೀಲರು ತಿಳಿಸಿದ್ದಾರೆ.