ಜೌನ್‌ಪುರ : ಜೌನ್‌ಪುರ ಜಿಲ್ಲಾ ಪಂಚಾಯತ್ ಚುನಾವಣೆಗೆ ಬಾಸ್ಕಾದಿಂದ ಸ್ಪರ್ಧಿಸಿದ್ದ ಮಿಸ್ ಇಂಡಿಯಾ ರನ್ನರ್ ಅಪ್ ದೀಕ್ಷಾ ಸಿಂಗ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ.
ಮಹಿಳಾ ಅಭ್ಯರ್ಥಿಗೆ ಕಾಯ್ದಿರಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ದೀಕ್ಷಾ ಸಿಂಗ್, ರಾಜಕೀಯ ಜೀವನವನ್ನು ಪ್ರಾರಂಭಿಸುವ ಮೊದಲೇ ಸೋಲು ಅನುಭವಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗಿನಾ ಸಿಂಗ್ ಸುಮಾರು 5,000 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದೀಕ್ಷಾ ಸಿಂಗ್ 5ನೇ ಸ್ಥಾನದಲ್ಲಿದ್ದು, ಕೇವಲ 2,000 ಮತ ಪಡೆದರು.
ಮುಂಬೈನಿಂದ ತನ್ನ ಹುಟ್ಟೂರು ಜೌನ್‌ಪುರಕ್ಕೆ ಬಂದಿದ್ದ ಸಿಂಗ್, ಜೌನ್‌ಪುರದಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ತಮ್ಮ ಚುನಾವಣಾ ಪ್ರಚಾರದ ವೇಳೆ ಪ್ರಮುಖ ವಿಷಯವಾಗಿ ಬಳಸಿಕೊಂಡಿದ್ದರು. ಜೊತೆಗೆ ಮಹಿಳೆಯರ ಪರಿಸ್ಥಿತಿ ಸುಧಾರಿಸುವ ಭರವಸೆ ಸಹ ನೀಡಿದ್ದರು. ಆದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.
ಜೌನ್‌ಪುರ ಜಿಲ್ಲೆಯ ಬಕ್ಷಾ ಪ್ರದೇಶದ ಚಿತ್ತೋರಿ ಗ್ರಾಮದ ನಿವಾಸಿ ದೀಕ್ಷಾ, ಗ್ರಾಮದಲ್ಲಿ 3ನೇ ತರಗತಿವರೆಗೆ ಓದಿದ ನಂತರ ತಂದೆಯೊಂದಿಗೆ ಮುಂಬೈಗೆ ಹೋಗಿ ನೆಲೆಯೂರಿದ್ದರು.
ಅವರು ಫೆಮಿನಾ ಮಿಸ್ ಇಂಡಿಯಾ 2015ರಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದಾರೆ. ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಕೆಲವು ಜಾಹೀರಾತುಗಳಲ್ಲಿ ಕಾಣಿಸಿದ್ದಾರೆ.