ಆಗ್ರಾ (ಉ.ಪ್ರ): ಮಹಿಳೆಯೊಬ್ಬರಿಂದ ಪರ್ಸ್ ಎಗರಿಸಿ ಎಸ್ಕೇಪ್ ಆಗುವ ಭರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಮನೆಯೊಳಗಿದ್ದ ಮಹಿಳೆಯನ್ನ ಛಾವಣಿಯಿಂದ ಕೆಳಗೆ ಎಸೆದಿರುವ ಘಟನೆ ಜಿಲ್ಲೆಯ ಟೆಡಿ ಭಾಗಿಯಾ ಭಾಗದಲ್ಲಿ ನಡೆದಿದೆ. ಟೆರೆಸ್ನಿಂದ ಬಿದ್ದ ಮಹಿಳೆಯನ್ನು ಪಲ್ಲವಿ ಶರ್ಮಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಡೆದಿದ್ದೇನು..?
ಮಂಗಳವಾರ ಮಧ್ಯಾಹ್ನ ಆಟೋದಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಪರ್ಸ್ ದೋಚಿದ್ದಾರೆ. ತಕ್ಷಣ ಮಹಿಳೆ ಕಿರುಚಾಡಿದ್ದು, ಅಲ್ಲಿದ್ದ ಜನರು ಕಳ್ಳರ ಬೆನ್ನತ್ತಿದ್ದಾರೆ. ಹೀಗಾಗಿ ಕಳ್ಳರು ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದಾರೆ. ಆದರೆ ಇದಕ್ಕೂ ಮೊದಲೇ ಓರ್ವ ಕಳ್ಳನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ.
ಇತ್ತ ಮನೆಯೊಳಗೆ ನುಗ್ಗಿದ ಕಳ್ಳರು ನೇರವಾಗಿ ಟೆರಸ್ಗೆ ತಲುಪಿದ್ದಾರೆ. ಆದರೆ ಮನೆಯೊಳಗೆ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಪಲ್ಲವಿ ಎಂಬಾಕೆ ಕೈಯಲ್ಲಿ ಹಿಡಿದಿದ್ದ ಕೋಲಿನ ಸಮೇತ ಟೆರೆಸ್ಗೆ ತಲುಪಿದ್ದಾಳೆ. ಅಲ್ಲೇ ಇದ್ದ ಕಳ್ಳರಿಗೆ ಪರ್ಸ್ ವಾಪಸ್ ನೀಡುವಂತೆ ಕೇಳಿದ್ದಾಳೆ. ಆದರೆ, ದುಷ್ಕರ್ಮಿಗಳು ಆಕೆಯನ್ನ 15 ಅಡಿ ಎತ್ತರದಿಂದ ಕೆಳಗೆ ಎಸೆದಿದ್ದಾರೆ.
ಬಳಿಕ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಓರ್ವ ಟೆರೆಸ್ನಿಂದ ಕೆಳಗೆ ಹಾರಿ ತಪ್ಪಿಸಿಕೊಂಡರೆ, ಇನ್ನೋರ್ವ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಘಟನೆಯಲ್ಲಿ ಮಹಿಳೆಯ ಬೆನ್ನು ಮೂಳೆ ಹಾಗೂ ಕೈಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಸಾರ್ವಜನಿಕರು ಇಬ್ಬರೂ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರಿದಿದೆ.
ಓದಿ:ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್: ಪ್ರತ್ಯೇಕ FIR ದಾಖಲಿಸಿದ NIA