ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಆಲ್ ಇಂಡಿಯಾ ಮಜ್ಲಿಸ್ -ಎ-ಇತ್ತೆಹಾದುಲ್ ಮುಸ್ಲಿಮೀನ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ನಿವಾಸಕ್ಕೆ ಭಾನುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ಆಗಮಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಎಐಎಂಐಎಂ ಮುಖ್ಯಸ್ಥರು ಈ ಸಂಬಂಧ ನವದೆಹಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ತಮ್ಮ ದೆಹಲಿ ನಿವಾಸದ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಓವೈಸಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ಎಐಎಂಐಎಂ ಮುಖ್ಯಸ್ಥರ ನಿವಾಸ ಮೇಲೆ ಸಂಜೆ 5.30ರ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನು ಓದಿ:ಶಿವಸೇನಾ ಹೆಸರು, ಚಿಹ್ನೆ ಖರೀದಿಗೆ 2 ಸಾವಿರ ಕೋಟಿ ಡೀಲ್: ಸಂಜಯ್ ರಾವತ್ ಗಂಭೀರ ಆರೋಪ
ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಡಿಸಿಪಿ ನೇತೃತ್ವದ ದೆಹಲಿ ಪೊಲೀಸರ ತಂಡ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳದಿಂದಲೇ ಸಾಕ್ಷ್ಯ ಸಂಗ್ರಹಿಸಿದೆ. ದುಷ್ಕರ್ಮಿಗಳ ಗುಂಪೊಂದು ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳನ್ನು ಹಾನಿಗೊಳಿಸಿದೆ ಎಂದು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಓವೈಸಿ ಆರೋಪಿಸಿದ್ದಾರೆ. "ನಾನು ರಾತ್ರಿ 11:30 ಕ್ಕೆ ನನ್ನ ನಿವಾಸಕ್ಕೆ ಬಂದಾಗ ಮನೆಯ ಕಿಟಕಿಗಳ ಗಾಜು ಒಡೆದಿತ್ತು. ಹಾಗೂ ಪ್ರಾಂಗಣದ ಸುತ್ತಮುತ್ತ ಕಲ್ಲುಗಳು ಬಿದ್ದಿರುವುದು ಕಂಡು ಬಂತು. ಈ ಬಗ್ಗೆ ನನ್ನ ಮನೆಯ ಸಹಾಯಕರು ಮಾಹಿತಿ ನೀಡಿದರು. ದುಷ್ಕರ್ಮಿಗಳ ಗುಂಪು ಸಂಜೆ 5:30 ರ ಸುಮಾರಿಗೆ ನಿವಾಸದ ಮೇಲೆ ಕಲ್ಲು ಎಸೆದಿದೆ ಎಂದು ಓವೈಸಿ ಘಟನೆಯ ಮಾಹಿತಿ ನೀಡಿದ್ದಾರೆ.