ಗುವಾಹಟಿ(ಅಸ್ಸೋಂ):ಮಣಿಪುರ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಷ್ಟೇ ಪ್ರಯತ್ನಪಟ್ಟರೂ ಪ್ರಕ್ಷುಬ್ಧ ವಾತಾವರಣ ತಿಳಿಯಾಗಿ ಶಾಂತಿ ನೆಲೆಸಲು ಸಾಧ್ಯವಾಗಿಲ್ಲ. ಹಿಂಸಾಚಾರದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗಳವಾರ ರಾತ್ರಿ ಮತ್ತೆ ಹಿಂಸಾಚಾರ ನಡೆದಿದೆ. ತಡರಾತ್ರಿ ಚರ್ಚ್‌ನಲ್ಲಿ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಪೂರ್ವ ಇಂಫಾಲ್‌ನ ಖಮೆನ್‌ಲೋಕ್ ಪ್ರದೇಶದ ಚರ್ಚ್‌ನಲ್ಲಿ ಈ ಬರ್ಬರ ಘಟನೆ ನಡೆದಿದೆ. ಗಾಯಾಳುಗಳನ್ನು ಇಂಫಾಲದ ರಾಜ್ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿಯ ವೇಳೆ ಚರ್ಚ್‌ನಲ್ಲಿ ಸುಮಾರು 25 ಮಂದಿ ಇದ್ದರು. ಏಕಾಏಕಿ ಚರ್ಚ್‌ಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿನ ದಾಳಿ ಹಿಂದೆ ಕುಕಿ ಸಮುದಾಯದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಣಿಪುರದ ಐಪಿಆರ್‌ಒ ಬಾಲಕೃಷ್ಣ ಈಟಿವಿ ಇಂಡಿಯಾಗೆ ಮಾಹಿತಿ ನೀಡಿದ್ದಾರೆ. ಒಂದು ದಿನದ ಹಿಂದಷ್ಟೇ, ಪೂರ್ವ ಇಂಫಾಲ್‌ನ ಚೌರಚಂದ್‌ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿ, ಮತ್ತು 8 ಮಂದಿ ಗಾಯಗೊಂಡಿದ್ದರು.
ಮೀಸಲಾತಿ ವಿಚಾರವಾಗಿ ಮಣಿಪುರದಲ್ಲಿ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವೆ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಹಿಂಸಾಚಾರ ನಡೆಯುತ್ತಿದೆ. ಎರಡು ಬಣಗಳ ನಡುವಿನ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದು, ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ರಾಜ್ಯದಲ್ಲಿ ಶಾಂತಿ ನೆಲೆಸಲು ಸರ್ಕಾರ ಶಾಂತಿ ಸಮಿತಿ ರಚಿಸಿದೆ.