ಶ್ರೀನಗರ(ಜಮ್ಮು-ಕಾಶ್ಮೀರ):ಅಪರಿಚಿತ ದುಷ್ಕರ್ಮಿಗಳು ಜಮ್ಮು - ಕಾಶ್ಮೀರದ ಶ್ರೀನಗರದಲ್ಲಿನ ಖನ್ಯಾರ್ ಪೊಲೀಸ್ ಠಾಣೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ನಡೆದಿದೆ. ಘಟನೆ ವೇಳೆ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲವಾದರೂ, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಭದ್ರತಾ ಪಡೆ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಶ್ರೀನಗರದ ಹಳೇ ನಗರದ ಪ್ರದೇಶದಲ್ಲಿನ ಪೊಲೀಸ್ ಠಾಣೆ ಮೇಲೆ ದಾಳಿಕೋರರು ಈ ಕೃತ್ಯವೆಸಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ದಾಳಿ ನಡೆಸಿರುವ ಆರೋಪಿಗಳ ಬಂಧನಕ್ಕಾಗಿ ಈಗಾಗಲೇ ಶೋಧಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.