ಚಿತ್ತೂರು (ಆಂಧ್ರಪ್ರದೇಶ):ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಮಗಳಿಗಿಂತ ಶಿಕ್ಷಣದಲ್ಲಿ ಮುಂದಿದ್ದಾಳೆ ಎಂಬ ಕಾರಣಕ್ಕಾಗಿ ರಾಜಕಾರಣಿಯೊಬ್ಬ ಶಿಕ್ಷಕರ ಮೇಲೆ ಒತ್ತಡ ಹೇರಿ ಆ ಶಾಲೆಯಿಂದ ವಿದ್ಯಾರ್ಥಿನಿಯನ್ನು ಹೊರ ಹಾಕಿಸಿದ್ದ ಎನ್ನಲಾಗ್ತಿದೆ. ಇದರಿಂದ ಬೇಸರಗೊಂಡ ಆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಚಿತ್ತೂರಿನ ಪಲಮನೇರ್ನಲ್ಲಿ ಬೆಳಕಿಗೆ ಬಂದಿದೆ.
ಪಲಮನೇರ್ ಪ್ರದೇಶದ ಗಂಗಾವರಂನಲ್ಲಿರುವ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮಿಸ್ಬಾ ಫಾತಿಮಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ರಾಜಕಾರಣಿಯೊಬ್ಬರ ಒತ್ತಡಕ್ಕೆ ಮಣಿದು ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಟಿಸಿ ನೀಡಿದ್ದರೆನ್ನಲಾದ ಶಾಲೆಯ ಪ್ರಾಂಶುಪಾಲರು ತಮ್ಮ ಮಗಳಿಗೆ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಮೃತ ವಿದ್ಯಾರ್ಥಿನಿಯ ತಂದೆ ನಜೀರ್ ಅಹಮದ್ ಸೋಡಾ ಗಾಡಿ ನಡೆಸಿ ಮಗಳನ್ನು ಕಷ್ಟಪಟ್ಟು ಖಾಸಗಿ ಶಾಲೆಗೆ ಸೇರಿಸಿದ್ದರು. ಮಿಸ್ಬಾ ಫಾತಿಮಾ ಕೂಡ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಅದೇ ಶಾಲೆಯಲ್ಲಿ ಓದುತ್ತಿದ್ದ ಪ್ರಭಾವಿ ರಾಜಕಾರಣಿಯೊಬ್ಬರ ಮಗಳು ಓದಿನಲ್ಲಿ ಹಿಂದೆ ಇದ್ದ ಕಾರಣ ಫಾತಿಮಾಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮೂರು ದಿನಗಳ ಹಿಂದೆ ಶಾಲೆಯಿಂದ ಹೊರಹಾಕಿ ಟಿಸಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಡೆತ್ ನೋಟ್ನಿಂದ ವಿಷಯ ಬಹಿರಂಗ:ಮಿಸ್ಬಾ ಫಾತಿಮಾ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾಳೆ. ಇದರಲ್ಲಿ ತಾನು ಅತ್ಯುತ್ತಮ ವಿದ್ಯಾರ್ಥಿಯಾಗಿರುವುದೇ ತನಗೆ ಮುಳ್ಳಾಯಿತು. ವೈಸಿಪಿ ಮುಖಂಡನ ಮಗಳು ಓದಿನಲ್ಲಿ ನನಗಿಂತ ಹಿಂದೆ ಇದ್ದಳು. ಇದನ್ನು ಸಹಿಸದ ಅವರು ನನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾಳೆ ಎನ್ನಲಾಗ್ತಿದೆ.