ಮಿರ್ಜಾಪುರ (ಉತ್ತರಪ್ರದೇಶ) :ತನಗೆ ಹಾವು ಕಚ್ಚಿದೆ, ಚಿಕಿತ್ಸೆ ನೀಡಿ ಎಂದು ಯುವಕನೊಬ್ಬ ಆಸ್ಪತ್ರೆಗೆ ಬಂದಿದ್ದಾನೆ. ಆತನ ವೇಷಭೂಷಣ ನೋಡಿ ಅನುಮಾನಿಸಿದ ವೈದ್ಯರು ಯಾವ ಹಾವು ಕಚ್ಚಿದೆ ಎಂದು ಕೇಳಿದ್ದಕ್ಕೆ, ಚೀಲದಲ್ಲಿ ಹಿಡಿದು ತಂದಿದ್ದ ವಿಷಸರ್ಪವನ್ನು ಹೊರಬಿಟ್ಟು ತೋರಿಸಿದ್ದಾನೆ. ಬೆದರಿದ ವೈದ್ಯರು ಹಾವನ್ನು ಮರಳಿ ಚೀಲಕ್ಕೆ ಹಾಕಲು ಹೇಳಿ, ಯುವಕನಿಗೆ ಚಿಕಿತ್ಸೆ ನೀಡಿದ್ದಾರೆ.
ಇದೆಲ್ಲಾ ನಡೆದಿದ್ದು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲಾ ಆಸ್ಪತ್ರೆಯಲ್ಲಿ. ಸೂಟು ಬೂಟಿನಲ್ಲಿದ್ದ ಯುವಕ ತನ್ನ ಬೆರಳಿಗೆ ಹಾವು ಕಚ್ಚಿದೆ. ಚಿಕಿತ್ಸೆ ನೀಡಿ ಎಂದು ಆಸ್ಪತ್ರೆಗೆ ಬಂದಿದ್ದ. ವೈದ್ಯರು ಅನುಮಾನಿಸಿದಾಗ ಕಚ್ಚಿದ ಹಾವನ್ನೇ ತೋರಿಸಿದ್ದಾನೆ. ಇದು ಆಸ್ಪತ್ರೆಯಲ್ಲಿ ಆತಂಕ ಉಂಟು ಮಾಡಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗಿದ್ದೇನು?:ಉತ್ತರ ಪ್ರದೇಶದ ಮಿರ್ಜಾಪುರದ ನಿವಾಸಿಯಾದ ಸೂರಜ್ ಎಂಬಾತನ ಮನೆಯಲ್ಲಿ ಸೋಮವಾರ ಸಂಜೆ ನಾಗರಹಾವು ಕಾಣಿಸಿಕೊಂಡಿದೆ. ಇದನ್ನು ಕಂಡ ಕುಟುಂಬಸ್ಥರು ಓಡಿ ಹೋಗಿದ್ದಾರೆ. ಹಿಡಿಯುವ ಪ್ರಯತ್ನದಲ್ಲಿ ಹಾವು ಸೂರಜ್ನ ಬೆರಳಿಗೆ ಕಚ್ಚಿದೆ. ಅಪಾಯ ಉಂಟಾಗದಿರಲಿ ಎಂದು ಯುವಕ ಹಾವಿನ ಸಮೇತವಾಗಿಯೇ ರಾತ್ರಿ ಆಸ್ಪತ್ರೆಗೆ ಬಂದಿದ್ದಾನೆ. ವೈದ್ಯರೇ, ನನಗೆ ಹಾವು ಕಚ್ಚಿದೆ ಚಿಕಿತ್ಸೆ ನೀಡಿ, ಇಲ್ಲವಾದಲ್ಲಿ ನಾನು ಸಾಯುತ್ತೇನೆ ಎಂದು ಕೇಳಿಕೊಂಡಿದ್ದಾನೆ.
ಸೂಟು ಬೂಟಿನಲ್ಲಿದ್ದ ಯುವಕನ ಕಂಡ ವೈದ್ಯರು ಹಾವು ಕಚ್ಚಿದ್ದನ್ನು ಅನುಮಾನಿಸಿದ್ದಾರೆ. ಯಾವ ಹಾವು ಕಚ್ಚಿದೆ, ಎಲ್ಲಿ ಕಚ್ಚಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕಷ್ಟೇ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳಿದ್ದಾರೆ. ಇದನ್ನು ಕೇಳಿದ ಯುವಕ ಚೀಲದಲ್ಲಿ ಹಿಡಿದು ತಂದಿದ್ದ ನಾಗರಹಾವನ್ನು ಆಸ್ಪತ್ರೆಯ ಬೆಡ್ ಮೇಲೆ ಬಿಟ್ಟು ತೋರಿಸಿ, ಇದೇ ಹಾವು ತನ್ನ ಕೈ ಬೆರಳಿಗೆ ಕಚ್ಚಿದೆ ಎಂದು ಹೇಳಿದ್ದಾನೆ.
ಆಸ್ಪತ್ರೆಯೊಳಗೆ ಹಾವನ್ನು ಹಿಡಿದುಕೊಂಡು ಬಂದಿದ್ದಲ್ಲದೇ, ಅದನ್ನು ಹೊರಬಿಟ್ಟದ್ದನ್ನು ಕಂಡ ವೈದ್ಯರು ಭಯಗೊಂಡಿದ್ದಾರೆ. ತಕ್ಷಣ ಯುವಕನಿಗೆ ಹಾವನ್ನು ಮರಳಿ ಚೀಲಕ್ಕೆ ಹಾಕಲು ಹೇಳಿದ್ದಾರೆ. ಅದರಂತೆ ಯುವಕ ಹಾವನ್ನು ಚೀಲದಲ್ಲಿ ತುಂಬಿದ್ದಾನೆ. ಯುವಕನ ಪ್ರಾಣಕ್ಕೆ ಅಪಾಯ ಉಂಟಾಗದಿರಲಿ ಎಂದು ಆ್ಯಂಟಿವೆನಮ್ ಇಂಜೆಕ್ಷನ್ ನೀಡಲಾಗಿದೆ. ಸದ್ಯ ಯುವಕನಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.
ಹಾವು ಕಂಡು ಬೆದರಿದ ವೈದ್ಯರು:ಸೂಟು ಬೂಟಿನಲ್ಲಿದ್ದ ಯುವಕ ಹಾವು ಕಚ್ಚಿದೆ, ಚಿಕಿತ್ಸೆ ಕೊಡಿ ಎಂದು ರಾತ್ರಿ ವೇಳೆ ಬಂದಿದ್ದ. ಈ ಬಗ್ಗೆ ಅನುಮಾನಿಸಿದಾಗ ಆತ ಹಾವನ್ನೇ ತೋರಿಸಿದ. ಇದು ನಮ್ಮಲ್ಲಿ ಭಯ ತಂದಿತು. ಬಳಿಕ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತರುಣ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಹಾವು ಕಚ್ಚಿದರೆ ಮೊದಲು ಏನು ಮಾಡಬೇಕು? ಚಿಕಿತ್ಸೆ ಹೇಗೆ? ಸಂಪೂರ್ಣ ಮಾಹಿತಿಯ ಮೊಬೈಲ್ ಆ್ಯಪ್