ಥಾಣೆ(ಮಹಾರಾಷ್ಟ್ರ): ಡೊಂಬಿವಿಲಿ ನಗರದ ಠಾಕುರ್ಲಿಯ ಖಾದಿ ಕಿನಾರಾ ಪ್ರದೇಶದಲ್ಲಿ 17 ವರ್ಷದ ಬಾಲಕಿಯ ಮೇಲೆ ಇಬ್ಬರು ಹಂತಕರು ಪೊಲೀಸರೆಂದು ಹೆದರಿಸಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಷ್ಣುನಗರ ಠಾಣೆ ಪೊಲೀಸರು ಅತ್ಯಾಚಾರ ಸಹಿತ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದನ್ನು ಹಂತಕರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿರುವ ಆಘಾತಕಾರಿ ಸಂಗತಿ ಬಯಲಾಗಿದೆ.
ಈ ಸಂಬಂಧ ವಿಷ್ಣುನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಸಂತ್ರಸ್ತೆ ಅಪ್ರಾಪ್ತ ವಿದ್ಯಾರ್ಥಿನಿ ಠಾಕುರ್ಲಿ ಖಾದಿ ಬೀಚ್ ಪ್ರದೇಶದಲ್ಲಿ ಸ್ನೇಹಿತನೊಂದಿಗೆ ವಾಕಿಂಗ್ ಹೋಗಿದ್ದಳು. ಇಬ್ಬರೂ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಆ ಜಾಗಕ್ಕೆ ಬಂದಿದ್ದಾರೆ. ನಿಮ್ಮಿಬ್ಬರ ಬಗ್ಗೆ ನಿಮ್ಮ ಪೋಷಕರಿಗೆ ತಿಳಿಸುತ್ತೇವೆ, ನಾವು ಪೊಲೀಸರು ಎಂದು ಸುಳ್ಳು ಹೇಳಿ ಇಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನಿಗೆ ಆರೋಪಿಗಳು ಕಪಾಳಕ್ಕೆ ಹೊಡೆದು ಬೆದರಿಸಿದ್ದಾರೆ.
ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ:ಬಳಿಕ ಆರೋಪಿಯೊಬ್ಬ ವಿದ್ಯಾರ್ಥಿನಿಯನ್ನು ಸ್ವಲ್ಪ ದೂರದ ಪೊದೆಯಂತಿದ್ದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆ ನಿರ್ಜನ ಸ್ಥಳದಲ್ಲಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಮಾಡಿರುವುದು ಮಾತ್ರವಲ್ಲದೆ ಅದನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಎರಡನೇ ಆರೋಪಿ ಸಂತ್ರಸ್ತೆಯ ಸ್ನೇಹಿತನನ್ನು ಸ್ಟೇಷನ್ ಏರಿಯಾದಲ್ಲಿ ಡ್ರಾಪ್ ಮಾಡಿ, ನಮ್ಮ ಸಾಹೇಬರು ಅಲ್ಲಿ ಕುಳಿತಿದ್ದಾರೆ, ನೀನು ಅವರ ಬಳಿ ಹೋಗಿ ಮಾತನಾಡು ಎಂದು ಹೇಳಿ ಹೋಗಿದ್ದಾನೆ.