ಮಗ್ರಾಹತ್ (ಪಶ್ಚಿಮ ಬಂಗಾಳ) :ಆಂಟಿಯ ಮನೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಆಂಟಿಯ ಮಗನೇ ಅತ್ಯಾಚಾರ ಎಸಗಿದ್ದು, ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಗ್ರಾಹತ್ ಎಂಬಲ್ಲಿ ನಡೆದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಮಗ್ರಾಹತ್ ನಿವಾಸಿಯಾಗಿದ್ದ ಸಂತ್ರಸ್ತ ಬಾಲಕಿಯು ಫಾಲ್ತಾದಲ್ಲಿರುವ ತನ್ನ ಆಂಟಿಯ ಮನೆಗೆ ಬಂದಿದ್ದಳು. ಈ ವೇಳೆ ತನ್ನ ಮೇಲೆ ಆಂಟಿಯ ಮಗ ನಿರಂತರ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ದೂರಿದ್ದಾಳೆ. ಬಳಿಕ ಬಾಲಕಿಯು ಅಸ್ವಸ್ಥಗೊಂಡಿದ್ದು, ಈಕೆಯನ್ನು ಆಂಟಿಯ ಸಂಬಂಧಿಕರು ಬಾಲಕಿಯ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಮನೆಗೆ ಬಂದ ಬಾಲಕಿಯು ಪೋಷಕರಲ್ಲಿ ತನ್ನ ಮೇಲೆ ಆಂಟಿಯ ಮಗ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ತಿಳಿಸಿದ್ದಾಳೆ. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಪೋಷಕರು ಇಲ್ಲಿನ ಡೈಮಂಡ್ ಹಾರ್ಬರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶನಿವಾರ ಬೆಳಗ್ಗೆ ಬಾಲಕಿಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿಸಲಾಗಿದೆ.
ಮೃತ ಬಾಲಕಿಯ ಅಣ್ಣ ಮಾತನಾಡಿ, ಆಂಟಿಯ ಮನೆಯವರು ಆಕೆಯನ್ನು ಮನೆಗೆ ಕರೆ ತಂದಾಗ ಸಂಪೂರ್ಣ ಅಸ್ವಸ್ಥಗೊಂಡಿದ್ದಳು. ಮನೆಗೆ ಬಂದಾಗ ಸ್ವಲ್ಪ ಸುಧಾರಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಹೇಳಿದಳು. ಬಳಿಕ ತೀವ್ರ ಅಸ್ವಸ್ಥಗೊಂಡಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದನು.
ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಗೊತ್ತಾಗುತ್ತಲೇ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ :ವ್ಯಕ್ತಿಯೊಬ್ಬಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿತ್ತು. ನಗರದ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ 17 ವರ್ಷದ ಬಾಲಕಿ ಗರ್ಭಿಣಿಯಾಗಿದ್ದನ್ನು ತಿಳಿದು ಇದೀಗ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಾಲಕಿಯು ಅಸ್ವಸ್ಥಗೊಂಡಾಗ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆಗ ಬಾಲಕಿಯು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರೀತಿಸಿದ ಹುಡುಗಿಯ ಮೇಲೆ ಅತ್ಯಾಚಾರ :ಮೊಬೈಲ್ ಮರಳಿ ಕೊಡುವುದಾಗಿ ನಂಬಿಸಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಬೆಂಗಳೂರಿಗೆ ಕರೆಸಿ ಅತ್ಯಾಚಾರ ಎಸಗಿದ್ದ ಘಟನೆ ಜೂನ್ 7ರಂದು ನಡೆದಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದರು. ತುಮಕೂರು ಮೂಲದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಿಯಕರ ಪುರುಷೋತ್ತಮ್ ಮತ್ತು ಆತನ ಸ್ನೇಹಿತ ಚೇತನ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದನ್ನೂ ಓದಿ :ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ; ಸ್ನೇಹಿತನಿಂದಲೂ ದುಷ್ಕೃತ್ಯ ಯತ್ನ