ನವದೆಹಲಿ:ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ತಾಯಿಯ ಮೇಲೆ ಬಾಲಕಿಯೊಬ್ಬಳು ಗುಂಡಿಕ್ಕಿದ ಘಟನೆ ಈಶಾನ್ಯ ದೆಹಲಿಯ ಘೋಂಡಾ ಪ್ರದೇಶದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಗೆ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಆರೋಪಿ ಬಾಲಕಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಬಾಲಕಿಯು ಸುಮಾರು 16 ರಿಂದ 17 ವರ್ಷದವಳಾಗಿದ್ದು, ತನ್ನ ಮೇಲೆ ಅತ್ಯಾಚಾರವಾಗಿದ್ದರಿಂದ 2021ರಲ್ಲಿ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ತನಗಾದ ಅನ್ಯಾಯದ ನೋವಿಗೆ ಸೇಡು ತೀರಿಸಿಕೊಳ್ಳಲು ಆರೋಪಿಯ ತಾಯಿಯ ಮೇಲೆ ಗುಂಡು ಹಾರಿಸಿದ್ದಾಳೆ. ಹಲ್ಲೆಗೊಳಗಾದ ಮಹಿಳೆ 50 ವರ್ಷದ ಖುರ್ಷೀದಾ ಉತ್ತರ ಘೋಂಡಾದ ಸುಬಾಷ್ ಮೊಹಲ್ಲಾದ ನಿವಾಸಿ. ಈ ಮಹಿಳೆ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವಂತೆ, ಶನಿವಾರ ಸಂಜೆ 5:30ಕ್ಕೆ ಸುಭಾಷ್ ಮೊಹಲ್ಲಾದಲ್ಲಿ ಬಾಲಕಿಯೊಬ್ಬಳು ಮಹಿಳೆ ಮೇಲೆ ಗುಂಡು ಹಾರಿಸಿದ್ದಾಳೆ ಎಂದು ಭಜನಪುರ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಘಟನೆ ತಿಳಿದ ಕೂಡಲೇ ಸ್ಟೇಷನ್ ಹೌಸ್ ಆಫೀಸರ್ ಸೇರಿದಂತೆ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ.
ಖುರ್ಷೀದಾ ಕಿರಾಣಿ ಅಂಗಡಿ ನಡೆಸುತ್ತಿದ್ದಾಳೆ. ಅಲ್ಲಿಗೆ ಬಂದ ಬಾಲಕಿ ಏಕಾಏಕಿ ಗುಂಡು ಹಾರಿಸಿದ್ದಾಳೆ. ಆಪಾದಿತ ಬಾಲಕಿ 2021ರಲ್ಲಿ ಅತ್ಯಾಚಾರದ ವಿರುದ್ಧ ಸೆಕ್ಷನ್ 328 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಹಾಗೆಯೇ ಖುರ್ಷೀದಾ ಪುತ್ರನ ವಿರುದ್ಧ ನಾಲ್ಕು ಪೋಕ್ಸೊ ಪ್ರಕರಣವಲ್ಲದೇ ಭಾರತೀಯ ದಂಡ ಸಂಹಿತೆಯ 376 (ಅತ್ಯಾಚಾರ) ಅಡಿಯಲ್ಲಿ ಕೇಸುಗಳಿವೆ.
ಇದನ್ನೂ ಓದಿ:ಮಗಳ ಎದುರು ಪತ್ನಿಗೆ ಇಟ್ಟಿಗೆಯಿಂದ ಹೊಡೆದು ಕೊಂದ ಪತಿ: ಸಂಭೋಗಕ್ಕೆ ಬರಲಿಲ್ಲವೆಂದು ಹೆಂಡತಿಯ ಕಥೆ ಮುಗಿಸಿದ ಗಂಡ