ಗುರ್ರಂಕೊಂಡ (ಆಂಧ್ರ ಪ್ರದೇಶ):ಅಪ್ರಾಪ್ತ ಬಾಲಕಿ ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬ ಚಾಕು ತೋರಿಸಿ ಅತ್ಯಾಚಾರವೆಸಗಿರುವ ಘಟನೆ ಆಂಧ್ರ ಪ್ರದೇಶದ ಗುರ್ರಂಕೊಂಡ ಮಂಡಲದಲ್ಲಿ ನಡೆದಿದೆ. ವಿಷಯ ತಿಳಿದ ಗ್ರಾಮಸ್ಥರು ಸಾಮೂಹಿಕವಾಗಿ ಹಲ್ಲೆ ನಡೆಸಿದ್ದು ಆರೋಪಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರ ವರದಿ ಪ್ರಕಾರ, "ಅನ್ನಮಯ್ಯ ಜಿಲ್ಲೆಯ ಗುರ್ರಂಕೊಂಡ ಮಂಡಲದ ಬಾಲಕಿ (13) ಝೆಡ್‌ಪಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ. ಭಾನುವಾರ ಹಸುಗಳನ್ನು ಮೇಯಿಸಲು ಹೋಗಿದ್ದಳು. ಅದೇ ಗ್ರಾಮದ ಉತ್ತಣ್ಣ (43) ಎಂಬ ವ್ಯಕ್ತಿ ಆಕೆಯ ಮೇಲೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಚಾಕುವಿನಿಂದ ಬಾಲಕಿಯ ಎದೆ ಭಾಗಕ್ಕೂ ಇರಿದಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕಿ ಕಿರುಚಾಡಿದ್ದಾಳೆ. ಅಕ್ಕಪಕ್ಕದ ರೈತರು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಆರೋಪಿ ಅವರನ್ನು ನೋಡಿ ಓಡಿ ಹೋಗಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಬಾಲಕಿಯನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಆರೋಪಿ ಉತ್ತಣ್ಣನ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಆರೋಪಿ ಪ್ರಾಣ ಕಳೆದುಕೊಂಡಿದ್ದಾನೆ. ಎರಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಸಿಐ ನಾಗೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ:ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ.. ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು
ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಆರೋಪಿ:ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಉತ್ತಣ್ಣ ಈ ಹಿಂದೆ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ರಾಜಮಹೇಂದ್ರವರಂ ಜೈಲಿನಲ್ಲಿ ಏಳು ವರ್ಷ ಶಿಕ್ಷೆ ಅನುಭವಿಸಿ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ. ಒಂದು ವರ್ಷದ ಹಿಂದೆ ಮಗಳನ್ನು ಕೊಂದಿದ್ದು, ಅನಾರೋಗ್ಯದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ನಂಬುವಂತೆ ಮಾಡಿದ್ದ. ನಿತ್ಯ ಚಾಕು ಹಿಡಿದು ತಿರುಗಾಡುತ್ತ ಎಲ್ಲರನ್ನು ಬೆದರಿಸಿ ಹಣ ದೋಚಿಕೊಂಡು ಜೀವನ ನಡೆಸುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೇ ಆರೋಪಿ ಹಣಕ್ಕಾಗಿ ಅಣ್ಣನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಗ್ರಾಮಸ್ಥರು ಪಂಚಾಯಿತಿ ನಡೆಸಿದ್ದರು.