ಜೈಪುರ: ರಾಜಧಾನಿಯ ಅಮೇರ್ನಲ್ಲಿ 9 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಮನೆಯಿಂದ ಅನತಿ ದೂರದಲ್ಲಿ ಪಾಳುಬಿದ್ದ ಕೊಠಡಿಯೊಂದರಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇನ್ನೂ ಪೊಲೀಸರು ಅಧಿಕೃತವಾಗಿ ತಿಳಿಸಿಲ್ಲ.
ಮಾಹಿತಿ ತಿಳಿದ ಕೂಡಲೇ ಅಮೇರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಎಸಿಪಿ ಅಮರಚಂದ್ರ ಸಿಂಗ್ ರಾವತ್, ಹೆಚ್ಚುವರಿ ಡಿಸಿಪಿ ಸುಮನ್ ಚೌಧರಿ, ಎಸ್‌ಎಚ್‌ಒ ಅಮೇರ್ ಶಿವನಾರಾಯಣ ಯಾದವ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಎಫ್‌ಎಸ್‌ಎಲ್ ತಂಡ ಪರಿಶೀಲಿಸಿ, ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದೆ.
ಮಾಹಿತಿ ಪ್ರಕಾರ ಶನಿವಾರ ಮಧ್ಯಾಹ್ನ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಬಾಲಕಿಯ ಮನೆಯವರು ಆಕೆಯ ಹುಡುಕಾಟದಲ್ಲಿದ್ದರು. ಈ ವೇಳೆ ದಾದಾಬರಿ ಬಳಿ ನಿರ್ಜನ ಪ್ರದೇಶದಲ್ಲಿ ಪಾಳು ಬಿದ್ದ ಕೊಠಡಿ ಬಳಿ ಬಾಲಕಿಯ ಶವವನ್ನು ನೋಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಯ ದೇಹ ಬೆತ್ತಲೆ ಸ್ಥಿತಿಯಲ್ಲಿದ್ದು, ಹರಿತವಾದ ಆಯುಧದಿಂದ ಕುತ್ತಿಗೆ ಸೀಳಲಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯ ಶವವನ್ನು ಗುರುತಿಸಲು ಸುತ್ತಮುತ್ತಲಿನವರನ್ನು ವಿಚಾರಿಸಿದ್ದಾರೆ. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಸವಿದ್ದ ಬಾಲಕಿಯ ಪೋಷಕರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ ಎಂದು ಉತ್ತರ ವಿಭಾಗದ ಹೆಚ್ಚುವರಿ ಡಿಸಿಪಿ ಸುಮನ್ ಚೌಧರಿ ತಿಳಿಸಿದ್ದಾರೆ.