ಬೇಗುಸರಾಯ್, ಬಿಹಾರ್:ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯನ್ನು ಆರೋಪಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಆರೋಪಿಗಳು ಅತ್ಯಾಚಾರ ಬಳಿಕ ನೊಂದು ಬಾಲಕಿ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿರುವುದೂ ಬೆಳಕಿಗೆ ಬಂದಿದೆ.
ಮಗಳ ಸಾವಿನ ನಂತರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಆತಂಕ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸದ ಕಾರಣ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕುಟುಂಬ ಸದಸ್ಯರಲ್ಲಿ ಆತಂಕ: ಈ ಘಟನೆ ಬೇಗುಸರಾಯ್‌ನ ವೀರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ 13 ವರ್ಷದ ಬಾಲಕಿ ಶವ ಪತ್ತೆಯಾಗಿದೆ. ನಂತರ ಕುಟುಂಬ ಸದಸ್ಯರಲ್ಲಿ ಆತಂಕ ನಿರ್ಮಾಣವಾಗಿದ್ದು, ಘಟನಾ ಸ್ಥಳದಲ್ಲಿ ಜನ ಗುಂಪು ಗುಂಪಾಗಿ ಸೇರಲಾರಂಭಿಸಿದರು.
ಸಂತ್ರಸ್ತೆಯ ತಾಯಿ ಹೇಳಿದ್ದು ಹೀಗೆ..:ಘಟನೆಯ ಸಮಯದಲ್ಲಿ ನಾನು ಬಹಿಯಾರ್‌ನಲ್ಲಿ ಗೋಧಿ ಕಟಾವ್ಗೆ ತೆರಳಿದ್ದೆ. ಮನೆಯಲ್ಲಿ ಮಗಳು ಒಂಟಿಯಾಗಿದ್ದಳು. ಇದರ ಲಾಭ ಪಡೆದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆಯನ್ನು ಕೊಂದು ಶವವನ್ನು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುವ ರೀತಿ ಬಿಂಬಿಸಿದ್ದಾರೆ ಅಂತಾ ತಾಯಿ ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವ ಪೊಲೀಸರು:ಘಟನೆಯ ಮಾಹಿತಿ ತಿಳಿದ ಕೂಡಲೇ ವೀರಪುರ ಪೊಲೀಸರು ಹಾಗೂ ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಾಥಮಿಕ ತನಿಖೆ ವೇಳೆ ಸುತ್ತಮುತ್ತಲಿನ ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಪೊಲೀಸರು ಮೃತದೇಹದ ಪಂಚನಾಮವನ್ನು ಸಿದ್ಧಪಡಿಸಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿದ್ದರು.
ಸದ್ಯ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಸಾವಿಗೆ ನಿಖರ ಕಾರಣಗಳೂ ತಿಳಿಯಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ. ಪೋಸ್ಟ್‌ಮಾರ್ಟ್ ವರದಿಗಾಗಿ ಕಾಯಲಾಗುತ್ತಿದೆ ಎಂದು ಬೇಗುಸರಾಯ್ ಡಿಎಸ್ಪಿ ಅಮಿತ್ ಕುಮಾರ್ ಮಾಹಿತಿ ನೀಡಿದರು.
ಮಹಿಳೆ ಮೇಲೆ ಅತ್ಯಾಚಾರ, ಸಜೀವ ದಹನ:ಇಂತಹುದೇ ಮತ್ತೊಂದು ಘಟನೆ ರಾಜಸ್ಥಾನದಿಂದಲೂ ವರದಿಯಾಗಿದೆ. ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿ ಸುಟ್ಟು ಹಾಕಿರುವ ಘಟನೆ ಗುರುವಾರ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರ ಸಂತ್ರಸ್ತೆ ಶುಕ್ರವಾರ ತಡರಾತ್ರಿ ಜೋಧ್‌ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮಹಿಳೆಯ ಸಾವಿನ ನಂತರ ಆಕ್ರೋಶಗೊಂಡ ಜನರು ಮಹಾತ್ಮಗಾಂಧಿ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿ 1 ಕೋಟಿ ಪರಿಹಾರ, ಸರ್ಕಾರಿ ನೌಕರಿ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲು ಅವರು ನಿರಾಕರಿಸಿದ್ದರು. ಬಳಿಕ ಸಮಾಜದ ಜನರು ಜಮಾಯಿಸಿದಾಗ ಪ್ರಕರಣ ದಾಖಲಾಗಿದೆ. ಈ ಪ್ರಕರಣ ತನಿಖೆ ಪೊಲೀಸರು ಕೈಗೊಂಡಿದ್ದಾರೆ.
ಓದಿ: ಕಾಡಿನಿಂದ ನಾಡಿಗೆ ಬಂದ ಒಂಟಿ ಆನೆ, ಗಜರಾಯನ ದಾಳಿಯಿಂದ ಯುವತಿ ಸಾವು