ವಿಜಯವಾಡ(ಆಂಧ್ರಪ್ರದೇಶ): ಅಪ್ರಾಪ್ತೆಯೋರ್ವಳು ತಾನು ಪ್ರೀತಿಸುತ್ತಿದ್ದ ರೌಡಿಶೀಟರ್ಗೋಸ್ಕರ ಕಾಲುವೆ ಹಾರಿ, ನೀರಿನಲ್ಲಿ ಈಜಿ ಮತ್ತೊಂದು ದಡ ತಲುಪಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯ ವಿವರ:ವಿಜಯವಾಡದ ಗುಣದಾಳ ವೆಂಕಟೇಶ್ವರ ನಗರದ ರೈವಸ್ ಕಾಲುವೆ ಪಕ್ಕದ ಮನೆಯಲ್ಲಿ 17 ವರ್ಷದ ಬಾಲಕಿ ಸಹೋದರಿಯ ಮಗುವಿನೊಂದಿಗೆ ಆಟವಾಡ್ತಿದ್ದಳು. ಇದ್ದಕ್ಕಿದ್ದಂತೆ ಮಗುವನ್ನು ಅಕ್ಕನ ಕೈಗೆ ಕೊಟ್ಟು ತಕ್ಷಣ ಬರುವುದಾಗಿ ತಿಳಿಸಿ ಹೊರಹೋಗಿದ್ದಾಳೆ. ಹೀಗೆ ಹೋದ ಆಕೆ ತುಂಬಿ ಹರಿಯುತ್ತಿದ್ದ ಕಾಲುವೆಗೆ ಹಾರಿದ್ದಾಳೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿರುವ ಸ್ಥಳೀಯರು ಆಕೆಯ ಅಕ್ಕನಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿತ್ತು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎನ್ಡಿಆರ್ಎಫ್ ತಂಡಗಳ ಸಹಾಯದೊಂದಿಗೆ ಎರಡು ದಿನಗಳ ಕಾಲ ಶೋಧ ನಡೆಸಿದ್ದಾರೆ. ಆದರೆ, ಬಾಲಕಿ ಪತ್ತೆಯಾಗಿಲ್ಲ.
ಈಜು ಕಲಿತಿರುವ ಬಾಲಕಿ: ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕಿಗೆ ಈಜು ಗೊತ್ತಿದೆ. ನಗರದಲ್ಲಿ ವಾಸವಾಗಿದ್ದ ರೌಡಿಶೀಟರ್ ಆಕೆಯನ್ನು ಕರೆದೊಯ್ದಿರುವ ಶಂಕೆಯಿದೆ. ಹೀಗಾಗಿ, ಆತನ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದರು.