ಕೊಚ್ಚಿ:ಅನಾರೋಗ್ಯಪೀಡಿತ ತಂದೆಗೆ ಅಪ್ರಾಪ್ತ ಮಗಳೊಬ್ಬಳು ಯಕೃತ್ನ ಒಂದು ಭಾಗ ದಾನ ಮಾಡಿ, ಜನ್ಮದಾತನ ಉಳಿಸಿಕೊಳ್ಳಲು ಮುಂದಾಗಿದ್ದಾಳೆ. ಇದಕ್ಕೆ ಕೇರಳ ಹೈ ಕೋರ್ಟ್ ಕೂಡ ಹಸಿರು ನಿಶಾನೆ ತೋರಿದೆ.
ನಮ್ಮ ದೇಹದಲ್ಲಿ ಕತ್ತರಿಸಿದರೂ ಮತ್ತೆ ಬೆಳೆಯುವ ಅಂಗಾಂಶ ಎಂದರೆ ಅದು ಯಕೃತ್. ಇಂತಹ ಯಕೃತ್ ಅನ್ನು ತನ್ನ ಅನಾರೋಗ್ಯ ಪೀಡಿತ ತಂದೆಗೆ 17 ವರ್ಷದ ಅಪ್ರಾಪ್ತ ಮಗಳು ದಾನ ಮಾಡಲು ಮುಂದಾಗಿದ್ದಳು. ಆದರೆ, ಅಪ್ತಾಪ್ತರ ಅಂಗಾಂಗ ದಾನಕ್ಕೆ ಸರ್ಕಾರದಲ್ಲಿ ಒಪ್ಪಿಗೆ ಇಲ್ಲದ ಹಿನ್ನೆಲೆ ಆಕೆ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನಿಯಮ 18ರ ಅಡಿ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ನಿಯಮಗಳು, 2014ರಲ್ಲಿ ಅಂಗಾಂಗ ದಾನಕ್ಕೆ ವಯಸ್ಸಿನ ಮಿತಿಗೆ ವಿನಾಯಿತಿ ನೀಡುವ ಕುರಿತು ಅರ್ಜಿದಾರರು ವಾದ ಮಂಡಿಸಿದ್ದರು. ಈ ವಾದ ಆಲಿಸಿದ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
ಈ ಕುರಿತು ತೀರ್ಪು ಪ್ರಕಟಿಸಿದ ನ್ಯಾ ವಿಜಿ ಅರುಣ್, ಅರ್ಜಿದಾರರಾದ ಬಾಲಕಿ ದೇವಾನಂದ ಅವರು ನಡೆಸಿದ ಅವಿರತ ಹೋರಾಟ ಕೊನೆಗೂ ಯಶಸ್ವಿಯಾಗಿರುವುದು ಸಂತಸ ತಂದಿದೆ. ತನ್ನ ತಂದೆಯ ಜೀವ ಉಳಿಸಲು ಅರ್ಜಿದಾರರ ಹೋರಾಟವನ್ನು ನಾನು ಶ್ಲಾಘಿಸುತ್ತೇನೆ. ದೇವಾನಂದರಂತಹ ಮಕ್ಕಳನ್ನು ಪಡೆದ ತಂದೆ ತಾಯಿಗಳು ಧನ್ಯರು ಎಂದಿದೆ.
ದೇವಾನಂದ ಅವರ ತಂದೆ ಆಲ್ಕೋಹಾಲಿಕ್ ಅಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಾದ ಡಿಕಂಪೆನ್ಸೇಟೆಡ್ ಕ್ರಾನಿಕ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಜೀವ ಉಳಿಸಲು ಹತ್ತಿರದ ಸಂಬಂಧಿಗಳು ಯಕೃತ್ ದಾನಕ್ಕೆ ಮುಂದಾದರು. ಆದರೆ, ದೇವಾನಂದ ಯಕೃತ್ ಮಾತ್ರ ಅವರಿಗೆ ಹೊಂದಿಕೆಯಾಗಿದೆ
ದೇವಾನಂದ ಕೂಡ ತಂದೆಗೆ ಯಕೃತ್ನ ಒಂದು ಭಾಗ ದಾನ ಮಾಡಲು ಉತ್ಸುಕರಾಗಿದ್ದು, ಅವರ ಜೀವ ಉಳಿಸಲು ಮುಂದಾಗಿದ್ದಾರೆ. ಇನ್ನು ಅರ್ಜಿಯಲ್ಲಿ, ತಾನು ದೈಹಿಕವಾಗಿ ಸದೃಢವಾಗಿದ್ದು ವೈದ್ಯಕೀಯ ಅಡೆ ತಡೆಗಳನ್ನು ನಿವಾರಣೆಗೆ ಕೂಡ ಮನವಿ ಮಾಡಿದ್ದರು.
ಏನಿದು ಯಕೃತ್ ದಾನ: ಆಲ್ಕೋಹಾಲಿಕ್ ಅಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಗುರಿಯಾದವರಲ್ಲಿ ಯಕೃತ್ ಊದಿಕೊಂಡಿದ್ದು, ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ನಮ್ಮ ದೇಹದ ಅಂಗಾಂಶಗಳ ಪ್ರಮುಖ ಕಾರ್ಯಚಾರಣೆಗೆ ಯಕೃತ್ ಅವಶ್ಯವಾಗಿದೆ. ಇದು ಕತ್ತರಿಸಿದರೂ ಮತ್ತೆ ಬೆಳೆಯುವ ಅಂಗವಾಗಿದೆ.
ಕಾಯಿಲೆ ಹೊಂದಿರುವ ರೋಗಿಗೆ ಆರೋಗ್ಯಯುತರ ಯಕೃತ್ನ ಒಂದು ಭಾಗವನ್ನು ಕತ್ತರಿಸಿ ಜೋಡಣೆ ಮಾಡಲಾಗುವುದು. ಆರೋಗ್ಯಯುತರಲ್ಲಿ ಕತ್ತರಿಸಿದ ಭಾಗ ಮತ್ತೆ ಬೆಳೆಯಲಿದ್ದು, ಅನಾರೋಗ್ಯಯುತರು ಚೇತರಿಕೆ ಕಾಣುತ್ತಾರೆ. ಇದರಿಂದ ಇಬ್ಬರಿಗೂ ಯಾವುದೇ ಹಾನಿಯಾಗುವುದಿಲ್ಲ.
ಇದನ್ನೂ ಓದಿ: ಅರ್ಜೆಂಟೀನಾಗೆ ವಿಶ್ವಕಪ್: ಕೇರಳದಲ್ಲಿ ಬಿರಿಯಾನಿ, ಹಲ್ವಾ, ಮೀನು ಉಚಿತವಾಗಿ ವಿತರಿಸಿ ಸಂಭ್ರಮಾಚರಣೆ