ನವದೆಹಲಿ: ಕ್ಷುಲ್ಲಕ ಕಾರಣಕ್ಕೆ 14 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯನ್ನು ಬಾಣಲೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನೋಯ್ಡಾದ ಸೆಕ್ಟರ್ 77ರಲ್ಲಿನ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿರುವ ಬಾಲಕಿ, ಭಾನುವಾರ ರಾತ್ರಿ ತನ್ನ ತಾಯಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಕೂಗಿ ನೆರೆಹೊರೆಯವರನ್ನು ಕರೆದಿದ್ದಾಳೆ.
ಮಹಿಳೆಯ ತಲೆಗೆ ಪೆಟ್ಟುಬಿದ್ದಿರುವುದನ್ನ ಗಮನಿಸಿದ ಸ್ಥಳೀಯರು, ಕೂಡಲೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ.
ಏನಿದು ಪ್ರಕರಣ? :ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್, 'ಮಹಿಳೆ ತನ್ನ ಮಗಳಿಗೆ ಪಾತ್ರೆಗಳನ್ನು ತೊಳೆಯುವಂತೆ ಹೇಳಿದ್ದಾಳೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿ, ತಾಯಿಯನ್ನ ಗದರಿಸಿದ್ದಾಳೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪದಲ್ಲಿ ಬಾಲಕಿ ಬಾಣಲೆ ತೆಗೆದುಕೊಂಡು ತನ್ನ ತಾಯಿಯ ತಲೆಗೆ ಹೊಡೆದಿದ್ದಾಳೆ ಎಂದರು.
ಸದ್ಯಕ್ಕೆ ಅಪಾಪ್ತ ಬಾಲಕಿಯನ್ನ ಸೆಕ್ಷನ್-304ರಡಿ ಮಕ್ಕಳ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಈ ಕುರಿತು ಮೃತ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಅಪರಾಧಕ್ಕೆ ಬಳಸಿದ ಬಾಣಲೆಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.