ಮಹೆಬೂಬ್ಬಾದ್(ತೆಲಂಗಾಣ) :ಆಸ್ತಿಗೋಸ್ಕರ ಅಪ್ರಾಪ್ತ ಮಗಳು(17 ವರ್ಷ) ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೆಹೆಬೂಬ್ಬಾದ್ನ ವೇಮುನೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ವೆಂಕಣ್ಣ(46) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ಕಳೆದ 10 ತಿಂಗಳ ಹಿಂದೆ ವೆಂಕಣ್ಣನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದಾದ ಬಳಿಕ ಏಕೈಕ ಪುತ್ರಿ ಗ್ರಾಮದ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದರ ಬಗ್ಗೆ ತಂದೆಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ದೊಡ್ಡವಳಾಗುವವರೆಗೂ ಕಾಯುವಂತೆ ಕಿವಿಮಾತು ಹೇಳಿದ್ದನು. ಆದರೆ, ತಂದೆಯ ಮಾತು ಮಗಳು ಕೇಳಿರಲಿಲ್ಲ. ಹೀಗಾಗಿ, ತನ್ನ ಮಗಳನ್ನ ಪ್ರೀತಿಸುತ್ತಿದ್ದ ವ್ಯಕ್ತಿ ಬಳಿ ಹೋಗಿ ಮಾತನಾಡುವ ಪ್ರಯತ್ನ ಮಾಡಿದ್ದನು. ಯುವಕ ಸಹ ವೆಂಕಣ್ಣನ ಮಾತು ಕೇಳಿರಲಿಲ್ಲ.
ಅಸಹಾಯಕನಾದ ವೆಂಕಣ್ಣ ಗ್ರಾಮದ ಹಿರಿಯರ ಬಳಿ ಹೋಗಿ ಮಾಹಿತಿ ಹಂಚಿಕೊಂಡಿದ್ದನು. ಈ ವೇಳೆ, ಹುಡುಗಿ ದೊಡ್ಡವಳಾದ ನಂತರ ಮದುವೆ ಮಾಡಿಕೊಳ್ಳುವಂತೆ ಯುವಕನಿಗೆ ಸೂಚನೆ ನೀಡಿದ್ದರು. ಅಲ್ಲಿಯವರೆಗೆ ಮನೆ ಹಾಗೂ ಜಮೀನಿನ ಆಸ್ತಿ ಪತ್ರ ಸಂಬಂಧಿಕರ ಬಳಿ ಇಡುವಂತೆ ತಿಳಿಸಲಾಗಿತ್ತು. ಈ ವಿಚಾರವಾಗಿ ತಂದೆ-ಮಗಳ ನಡುವೆ ವಾಗ್ವಾದ ಉಂಟಾಗಿದ್ದು, ತಂದೆಯ ಮೇಲೆ ಮಗಳು ಹಲ್ಲೆ ಮಾಡಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಅಸಹಾಯಕ ಮಹಿಳೆಯಿಂದ ಬಾಡಿ ಮಸಾಜ್: ಪೊಲೀಸ್ ಅಧಿಕಾರಿ ಅಮಾನತು..
ಮಗಳು ಹಾಗೂ ಗ್ರಾಮಸ್ಥರು ವೆಂಕಣ್ಣನ ಕೊಲೆ ವಿಷಯ ಗೌಪ್ಯವಾಗಿಟ್ಟಿದ್ದರು. ಆದರೆ, ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದರು. ಈ ವೇಳೆ ಕೊಲೆಯಲ್ಲಿ ಮಗಳ ಹೊರತಾಗಿ ಬೇರೆ ಯಾರಾದ್ರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸರು, ವೆಂಕಣ್ಣ ಮದ್ಯ ವ್ಯಸನಿಯಾಗಿದ್ದು, ಆಸ್ತಿ ಪತ್ರ ಮಾರುವ ಸಾಧ್ಯತೆ ಇರುವುದರಿಂದ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮಗಳು ಆತನ ಮೇಲೆ ಹಲ್ಲೆ ನಡೆಸಿದ್ದು, ವೆಂಕಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ತಿಳಿಸಿದ್ದಾರೆ.