ಸಿರ್ಸಿಲ್ಲಾ(ತೆಲಂಗಾಣ):ಪೊಲೀಸ್ ಠಾಣೆ ಮೆಟ್ಟಿಲೇರಲು ಇಂದಿನ ದಿನಗಳಲ್ಲೂ ಅನೇಕರು ಹಿಂದೇಟು ಹಾಕ್ತಾರೆ. ಆದರೆ, ಮನೆಯಲ್ಲಿ ನಡೆಯುತ್ತಿದ್ದ ತಂದೆ-ತಾಯಿ ಜಗಳದಿಂದ ನೊಂದಿರುವ ಬಾಲಕನೋರ್ವ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಅಪ್ಪ ದಿನಾಲೂ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಾರೆ ಸಾರ್ ಎಂದು 3ನೇ ತರಗತಿ ಪುಟ್ಟ ಬಾಲಕನೋರ್ವ ಪೊಲೀಸರಿಗೆ ತಿಳಿಸಿದ್ದಾನೆ. ತೆಲಂಗಾಣದ ಸಿರ್ಸಿಲ್ಲಾ ಎಂಬಲ್ಲಿ ಈ ಘಟನೆ ನಡೆಯಿತು.
ಪ್ರತಿದಿನ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬರುವ ತಂದೆ ನನ್ನ ತಾಯಿಗೆ ಹಲ್ಲೆ ನಡೆಸುತ್ತಾರೆ. ಇದರಿಂದ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ ಎಂದು ಆತ ಪ್ರಕರಣ ದಾಖಲಿಸಿದ್ದಾನೆ. ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್ನಲ್ಲಿ ವಾಸವಾಗಿರುವ ದೀಪಿಕಾ-ಬಾಲಕಿಶನ್ ದಂಪತಿಗೆ ಭರತ್ ಮತ್ತು ಶಿವಾನಿ ಎಂಬಿಬ್ಬರು ಮಕ್ಕಳಿದ್ದಾರೆ. ಬಾಲಕಿಶನ್ ಮದ್ಯಕ್ಕೆ ದಾಸನಾಗಿ ಪತ್ನಿ ಮನಬಂದಂತೆ ಹಲ್ಲೆ ನಡೆಸುತ್ತಾನೆ. ಇದನ್ನು ನೋಡಿರುವ ಭರತ್ ದೌರ್ಜನ್ಯ ಸಹಿಸಲಾಗದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.