ರಂಗಾರೆಡ್ಡಿ(ತೆಲಂಗಾಣ):ಅಪ್ರಾಪ್ತೆಯೊಬ್ಬಳ ಮೇಲೆ 10ನೇ ತರಗತಿ ವ್ಯಾಸಂಗ ಮಾಡ್ತಿದ್ದ ಬಾಲಕನೊಬ್ಬ ಅತ್ಯಾಚಾರವೆಸಗಿದ್ದು, ತೆಲಂಗಾಣದ ರಂಗಾರೆಡ್ಡಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಬಾಡಿಗೆ ವಾಸವಾಗಿದ್ದ ಕರ್ನಾಟಕದ ಕುಟುಂಬವೊಂದರ ಬಾಲಕ ದುಷ್ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.
ಘಟನೆ ವಿವರ
ಸ್ಥಳೀಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡ್ತಿದ್ದ ಹುಡುಗನ ಕುಟುಂಬ ಮನೆವೊಂದರಲ್ಲಿ ಬಾಡಿಗೆ ವಾಸವಾಗಿತ್ತು. ಮನೆಯ ಮಾಲೀಕರ ಮಗಳ ಮೇಲೆ ಕಣ್ಣು ಹಾಕಿದ್ದ ಬಾಲಕ ಆರಂಭದಲ್ಲಿ ಆಕೆಯನ್ನ ಮಾತನಾಡಿಸಲು ಶುರು ಮಾಡಿದ್ದಾನೆ. ಆರಂಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಕೆಲ ದಿನಗಳ ನಂತರ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದರಿಂದ ಪೋಷಕರ ಬಳಿ ದೂರು ನೀಡಿದ್ದಾಳೆ.
ಹೀಗಾಗಿ, ಆತನಿಗೆ ಎಚ್ಚರಿಕೆ ನೀಡಿ, ಈ ರೀತಿಯಾಗಿ ನಡೆದುಕೊಳ್ಳದಂತೆ ಸೂಚನೆ ನೀಡಿದ್ದಾರೆ. ಆದರೆ, ಬಾಲಕನ ನಡವಳಿಕೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಾರದ ಕಾರಣ ಮನೆ ಖಾಲಿ ಮಾಡಿಸಿ, ಅದನ್ನ ಮಾರಾಟ ಮಾಡಿ ಬೇರೆ ಕಡೆ ತೆರಳಿದ್ದಾರೆ.
ಇದನ್ನೂ ಓದಿರಿ:ಅಧ್ಯಾತ್ಮಿಕ ಪ್ರಭಾವಕ್ಕೊಳಗಾಗಿ 2 ತಿಂಗಳ ಹಿಂದೆ ಬಾಲಕಿ ಕಾಣೆ.. ಹುಡುಕಿಕೊಡುವಂತೆ ಪೋಷಕರ ಮನವಿ!
ಮನೆ ಮಾರಾಟ ಮಾಡಿ ಬೇರೆ ಕಡೆ ಹೋದರೂ ಬಿಡದ ಅಪ್ರಾಪ್ತ, ಬಾಲಕಿ ಉಳಿದುಕೊಂಡಿದ್ದ ಪ್ರದೇಶ ಪತ್ತೆ ಹಚ್ಚಿ, ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಬಾಲಕಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದು, ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಶಂಶಾಬಾದ್ ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯನ್ನ ಮನೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬಾಲಕ ಕರ್ನಾಟಕದ ಕಲಬುರಗಿಯ ನಿವಾಸಿ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಆತ ಕರ್ನಾಟಕಕ್ಕೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಅತ್ತಾಪುರದಲ್ಲಿ ಆತನ ಬಂಧನ ಮಾಡಿದ್ದು, ಇದೀಗ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.