ಇಂಫಾಲ್(ಮಣಿಪುರ) :ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಯು ದೇಶಾದ್ಯಂತ ಭಾರಿ ಟೀಕೆಗೆ ಗುರಿಯಾಗಿದ್ದು, ಪ್ರಕರಣದಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮಣಿಪುರ ಗೃಹ ಇಲಾಖೆ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸಿದೆ.
ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವ 26 ಸೆಕೆಂಡ್‌ಗಳ ವಿಡಿಯೋ ಜುಲೈ 20 ರಂದು ವೈರಲ್ ಆಗಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿ ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟುವಂತೆ ಆಗ್ರಹ ಕೇಳಿಬಂದಿತ್ತು. ತಕ್ಷಣವೇ ಕಾರ್ಯಾಚರಣೆ ಕೈಗೊಂಡಿದ್ದ ಸರ್ಕಾರ ಪ್ರಮುಖ ಆರೋಪಿ, ವಿಡಿಯೋ ಮಾಡಿದ ವ್ಯಕ್ತಿ, ಅಪ್ರಾಪ್ತ ಸೇರಿ 7 ಮಂದಿಯನ್ನು ಬಂಧಿಸಿದೆ. ಇದೀಗ ಸಿಬಿಐ ವಿಚಾರಣೆಗೂ ನೀಡಿದೆ.
ಮಣಿಪುರದಾಚೆ ತನಿಖೆಗೆ ಕೇಂದ್ರ ಸುಪ್ರೀಂಗೆ ಅಫಿಡವಿಟ್:ವಿಡಿಯೋ ವೈರಲ್ ಬಳಿಕ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಉದ್ರಿಕ್ತರಾಗಿ ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಮಣಿಪುರದ ಹೊರಗೆ ನಿಖರ ತನಿಖೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡವಿಡ್ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ, ಮಹಿಳೆಯರ ವಿಡಿಯೋವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನೂ ಸಹ ಬಂಧಿಸಲಾಗಿದೆ.
ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ATSUM) ಮೇ 3 ರಂದು ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಯ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಈವರೆಗೂ 160 ಕ್ಕೂ ಅಧಿಕ ಜನರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ.