ನವದೆಹಲಿ:ದೇಶ ಸೇವೆ ಮಾಡಿ ನಾಲ್ಕು ವರ್ಷಗಳ ನಂತರ ನಿವೃತ್ತರಾಗುವ ಅಗ್ನಿವೀರರಿಗೆ ಆಯಾ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ನೆರವಾಗಬೇಕು. ಹುದ್ದೆಗಳ ನೇಮಕಾತಿ ವೇಳೆ ವೀರಯೋಧರಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ 'ಅಗ್ನಿವೀರ'ರಿಗೆ ಅವಕಾಶಗಳನ್ನು ಒದಗಿಸುವುದು ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಅಗ್ನಿಪಥ್ ಯೋಜನೆ ಸಶಸ್ತ್ರ ಪಡೆಗಳ ಸೇನಾಬಲವನ್ನು ಯುವ, ಹೈಟೆಕ್ ಮತ್ತು ಅಲ್ಟ್ರಾ ಆಧುನೀಕರಣಗೊಳಿಸಲಿದೆ ಎಂದು ಹೇಳಿದರು.
ಅಗ್ನಿವೀರರು 4 ವರ್ಷಗಳಿಗೆ ಸೀಮಿತವಾಗಿ ದೇಶ ಸೇವೆ ಮಾಡಿದ ನಂತರ ನಿರುದ್ಯೋಗಿಗಳಾಗುವ ಬಗ್ಗೆ ಮಾತನಾಡಿದ ಅವರು, ಯುವ ಸೈನಿಕರು ತಾಯ್ನಾಡಿನ ಸೇವೆಯ ಬಳಿಕ ಅವರ ಕೌಶಲ್ಯ ಮತ್ತು ಶಿಕ್ಷಣವನ್ನು ಮುಂದುವರಿಸಲು ವಿವಿಧ ಇಲಾಖೆಗಳು ಒಪ್ಪಂದ ಮಾಡಿಕೊಂಡಿವೆ. ಅದರಂತೆ ಅವರಲ್ಲಿರುವ ಕೌಶಲ್ಯಕ್ಕೆ ಅನುಗುಣವಾಗಿ ಸೇವೆ ಆರಂಭಿಸಲಿದ್ದಾರೆ. ಈ ವ್ಯವಸ್ಥೆಯ ಭಾಗವಾಗಿ ರಾಜ್ಯ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಅವರ ನೆರವಿಗೆ ನಿಲ್ಲಬೇಕು ಎಂದು ಕೋರಿದರು.
ಇದೇ ವೇಳೆ, ವಿವಿಧ ಹುದ್ದೆಗಳಲ್ಲಿ ಅಗ್ನಿವೀರರಿಗೆ ಬೆಂಬಲ ನೀಡುತ್ತಿರುವ ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ, ರೈಲ್ವೆ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯವನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ಉಳಿದ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಕಾರ್ಪೊರೇಟ್ ವಲಯಗಳು ಮುಂದೆ ಬರುವಂತೆ ಕರೆ ನೀಡಿದರು.
ಒಪ್ಪಂದಗಳಿಗೆ ಇಲಾಖೆಗಳು ಸಹಿ:ರಕ್ಷಣಾ ಸಚಿವಾಲಯ, ಶಿಕ್ಷಣ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯಗಳು ಸಶಸ್ತ್ರ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಗ್ನಿವೀರರ ಶಿಕ್ಷಣವನ್ನು ಮುಂದುವರೆಸಲು ಅನುಕೂಲವಾಗುವಂತೆ ವಿವಿಧ ಪಾಲುದಾರರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದವು. ಅಗ್ನಿವೀರರ ಅನುಭವ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ಪ್ರಮಾಣಪತ್ರಗಳ ಪ್ರಶಸ್ತಿಯನ್ನು ನೀಡಲೂ ಉದ್ದೇಶಿಸಲಾಗಿದೆ ಎಂದು ರಕ್ಷಣಾ ಸಚಿವರು ಇದೇ ವೇಳೆ ಮಾಹಿತಿ ನೀಡಿದರು.