ನವದೆಹಲಿ:ಜನರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಪಾರ್ಕಿಂಗ್ ಸಮಸ್ಯೆ ಉಂಟು ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಇದು 'ಕಿರಿಕ್ ವಾಹನ ಮಾಲೀಕರಿಗೆ' ನಷ್ಟವಾದರೆ, ಜನರಿಗೆ ಲಾಭವಾಗಲಿದೆ.
ಹೇಗಿದೆ ಗೊತ್ತಾ ಹೊಸ ಪ್ಲಾನ್:ಯಾರಾದರೂ ವಾಹನ ಸವಾರರು ನೋ ಪಾರ್ಕಿಂಗ್ ಅಥವಾ ಜನನಿಬಿಡ ಸ್ಥಳದಲ್ಲಿ ಯರ್ರಾಬಿರ್ರಿಯಾಗಿ ವಾಹನ ನಿಲ್ಲಿಸಿದ್ದರೆ, ಅಂತಹದ್ದನ್ನು ಜನರು ಫೋಟೋ ತೆಗೆದು ಅದನ್ನು ಟ್ರಾಫಿಕ್ ಪೊಲೀಸ್ ಇಲಾಖೆಗೆ ಕಳುಹಿಸಬೇಕು. ಆಗ ಆ ವಾಹನ ಮಾಲೀಕರಿಗೆ 1 ಸಾವಿರ ರೂ ದಂಡ ಬೀಳಲಿದೆ. ಅದನ್ನು ಕಳುಹಿಸಿದವರಿಗೆ 500 ರೂಪಾಯಿ ಬಹುಮಾನವೂ ಉಂಟು.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ವಿನೂತನ ಉಪಾಯ ಮಾಡಿದೆ. ವಾಹನವನ್ನು ನಿಲ್ಲಿಸಬಾರದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದರೆ ಅಂಥವರಿಗೆ ಝಲಕ್ ನೀಡಲಾಗುವುದು. ನೋ ಪಾರ್ಕಿಂಗ್ ಜಾಗದಲ್ಲಿನ ವಾಹನದ ಫೋಟೋವನ್ನು ಕಳುಹಿಸಿದರೆ, ಅಂತಹ ವಾಹನಕ್ಕೆ 1,000 ದಂಡ ಬೀಳಲಿದೆ. ಆ ದಂಡದ ಮೊತ್ತದಲ್ಲಿನ 500 ರೂಪಾಯಿ ಫೋಟೋ ಕಳುಹಿಸಿದವರಿಗೆ ಬಹುಮಾನವಾಗಿ ಸಿಗಲಿದೆ ಎಂದು ಹೇಳಿದರು.