ಧಾರವಾಡ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಇಳಕಲ್ ಸೀರೆಯುಟ್ಟು ಸಂಸತ್ತಿಗೆ ಬಂದಿದ್ದು ವಿಶೇಷವಾಗಿತ್ತು.
ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ನಮ್ಮ ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ನ ಮಹಿಳೆಯರು ಅನ್ನುವುದು ಇನ್ನೂ ವಿಶೇಷ. ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಲ್ಹಾದ್ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯಿಂದ ಉಡುಗೊರೆಯಾಗಿ ನೀಡಿದ್ದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ್ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯಾರಿಗೆ ಸೂಚಿಸಿದ್ದರು.
ಆರತಿ ಕ್ರಾಪ್ಟ್ಸ್:ಆರತಿ ಕ್ರಾಪ್ಟ್ಸ್ ಮಾಲೀಕರಾದ ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು. ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಆರತಿ ಅವರು, ಸುಮಾರು 210 ಮಹಿಳೆಯರ ತಂಡ ಕಟ್ಟಿ, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ. ಗ್ರಾಹಕರಿಂದ ಕಸೂತಿ ಸೀರೆ, ಶಲ್ಯೆ, ಉಡುಗೆಗಳ ಬೇಡಿಕೆ ಪಡೆಯುವ ಆರತಿ ಹಿರೇಮಠ ಅವರು ತಮ್ಮ ಮಹಿಳಾ ಸಿಬ್ಬಂದಿ ಮನೆಗೆ ತೆರಳಿ, ಪರಿಕರ ಪೂರೈಸುತ್ತಾರೆ ಮತ್ತು ಸಿದ್ಧವಾದ ಬಟ್ಟೆಗಳನ್ನು ತಾವೇ ಸಂಗ್ರಹ ಮಾಡುತ್ತಾರೆ.