ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಸರ್ಕಾರದ ಯೋಜನೆಯ ಭಾಗವಾಗಿ ಭಾರತವು ಎರಡು C-130J ಮಿಲಿಟರಿ ಸಾರಿಗೆ ವಿಮಾನಗಳನ್ನು ಸೌದಿ ಅರೇಬಿಯದ ಜೆಡ್ಡಾದ ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ. ಈ ಅನುಕ್ರಮದಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಹಡಗು ಕೂಡ ಸುಡಾನ್ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಈ ಕುರಿತು ಮಾಹಿತಿ ನೀಡಿದೆ.
ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತುರ್ತು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲಿಯ ಭದ್ರತಾ ಪರಿಸ್ಥಿತಿ ಬಗ್ಗೆ ಗಮನಹರಿಸಲಾಗುತ್ತಿದೆ. ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ ಭದ್ರತಾ ಪರಿಸ್ಥಿತಿಯು ಅಸ್ಥಿರವಾಗಿದ್ದು, ಅಲ್ಲಿ ಹಲವು ಸ್ಥಳಗಳಲ್ಲಿ ಭೀಕರ ಘರ್ಷಣೆಗಳು ಇನ್ನು ಮುಂದುವರೆದಿವೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ನಾವು ಸುಡಾನ್‌ನಲ್ಲಿ ಉದ್ಭವಿಸುವ ಬಿಕ್ಕಟ್ಟು ಮತ್ತು ಭದ್ರತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.
ಸುಡಾನ್‌ನಲ್ಲಿ ಸಿಲುಕಿರುವ ಮತ್ತು ಅಲ್ಲಿಂದ ಹೊರಬರಲು ಆಗದೇ ಇರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಲ್ಲಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ಅಲ್ಲಿಯ ಭಾರತೀಯರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿರಲು ಸಲಹೆ ನೀಡುತ್ತಿರುವುದಾಗಿ ಹೇಳಿದೆ.
ಭಾರತೀಯ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆ:ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸುಡಾನ್‌ನ ಭಾರತೀಯ ರಾಯಭಾರ ಕಚೇರಿ, ಸುಡಾನ್ ಅಧಿಕಾರಿಗಳು, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಈಜಿಪ್ಟ್ ಮತ್ತು ಯುಎಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಭಾರತ ಸರ್ಕಾರವು ಭಾರತೀಯ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ವೇಗವಾಗಿ ಪೂರ್ಣಗೊಳಿಸಲು ಹಲವಾರು ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ವಾಯುಪಡೆಯ ಎರಡು C-130J (ವಿಮಾನಗಳು) ಪ್ರಸ್ತುತ ಜೆಡ್ಡಾದಲ್ಲಿ ಟೇಕ್ ಆಫ್ ಮಾಡಲು ಸಿದ್ಧವಾಗಿವೆ. INS ಸುಮೇಧಾ ಕೂಡ ಭಾರತೀಯರನ್ನ ಕರೆತರಲು ಎಲ್ಲ ಸಿದ್ದತೆಗಳೊಂದಿಗೆ ತಯಾರಾಗಿದೆ ಎಂದು ಸಚಿವಾಲಯ ಹೇಳಿದೆ.