ಬಟಿಂಡಾ (ಪಂಜಾಬ್): ಇಂದಿನ ಆಧುನಿಕ ಹಾಗೂ ವೇಗದ ಜೀವನದಲ್ಲಿ ಯಾವುದಕ್ಕೂ ಪುರುಸೊತ್ತೇ ಇಲ್ಲದಂತಾಗಿದೆ. ಹೊಸ ಜಮಾನದವರಿಗೆ ಎಲ್ಲವೂ ಫಾಸ್ಟ್ ಆ್ಯಂಡ್ ಕ್ವಿಕ್ ಆಗಿ ಅಂಗೈಯ್ಯಲ್ಲಿರಬೇಕು. ಹಾಗೆಯೇ ಆಹಾರವೂ ಕೂಡ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆಹಾರವನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಆದರೆ ಕಡಿಮೆ ಸಮಯದಲ್ಲಿ ತಯಾರಿಸುವ ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಅಪಾಯಕಾರಿ ಎನ್ನುವ ಅರಿವು ಎಲ್ಲರಿಗೂ ಇಲ್ಲ.
ಇಂದಿನ ನಮ್ಮ ಆಹಾರ ಪದ್ಧತಿ ಬದಲಾಗಿದೆ. ತಿಂಗಳಿಗೊಂದು ಬಾರಿಯೋ ಅಥವಾ ವೀಕೆಂಡ್‌ನಲ್ಲಿ ಹೊರಗಡೆ ತಿನ್ನುವ ಅಭ್ಯಾಸವಿದ್ದ ಕಾಲ ಮುಗಿದು, ವಾರದ ಪ್ರತಿ ದಿನವೂ ಹೊರಗಡೆ ತಿನ್ನುವ ಕಾಲಘಟಕ್ಕೆ ಬಂದು ತಲುಪಿದ್ದೇವೆ. ಅದರಲ್ಲೂ ಹೊರಗಿನ ತಿಂಡಿ ಎಂದರೆ ಪಿಜ್ಜಾ, ಬರ್ಗರ್ ಎಂಬ ಕಾಲ ಬಂದಿದೆ. ಹಾಗಾಗಿ ಈಗ ಹೊರಗಡೆ ತಿನ್ನುವ ಪಿಜ್ಜಾ, ಬರ್ಗರ್ನಲ್ಲೇ ಆರೋಗ್ಯವನ್ನು ತುಂಬಿ ಕೊಡುವ ಕೆಲಸ ಮಾಡುತ್ತಿದ್ದಾರೆ ಪಂಜಾಬ್ನ ಬಟಿಂಡಾದ ವ್ಯಕ್ತಿ ರಾಕೇಶ್ ನರುಲಾ.
ಬಟಿಂಡಾದಲ್ಲಿ ಮಿಲೆಟ್ಸ್ ಮ್ಯಾನ್ ಎಂದೇ ಕರೆಯಲ್ಪಡುವ ರಾಕೇಶ್ ನರುಲಾ ಅವರು ಒರಟು ಧಾನ್ಯಗಳಿಂದ ತ್ವರಿತ ಆಹಾರವನ್ನು ತಯಾರಿಸುವ ವಿಶೇಷ ಯೋಜನೆ ಕೈಗೊಂಡಿದ್ದಾರೆ. ಇವರ ವಿನೂತನ ಪ್ರಯತ್ನದಿಂದಾಗಿ ಜನರು ಫಾಸ್ಟ್ಫುಡ್ ಸೇವನೆಯಿಂದ ದೇಹಕ್ಕೆ ಸೇರುವ ಕೊಬ್ಬು ತೊಡೆದುಹಾಕಿ, ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಬಟಿಂಡಾದ ಮಹೇಶ್ವರಿ ಚೌಕ್ ಬಳಿಯ ರೆಸ್ಟೋರೆಂಟ್‌ವೊಂದರ ಮಾಲೀಕ ಜಸ್ದೀಪ್ ಸಿಂಗ್ ಗ್ರೆವಾಲ್ ಅವರನ್ನು ಸಂಪರ್ಕಿಸಿದ ರಾಕೇಶ್ ನರುಲಾ ಸಿರಿಧಾನ್ಯಗಳಿಂದ ಪಿಜ್ಜಾ ಬೇಸ್ ತಯಾರಿಸಲು ಪ್ರಾರಂಭಿಸಿದ್ದು, ಅವರ ಈ ಪ್ರಯತ್ನ ಯಶಸ್ವಿಯಾಗಿದ್ದು, ಪಿಜ್ಜಾಪ್ರಿಯರಿಂದ ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಕೊಬ್ಬು ಆರೋಗ್ಯಕ್ಕೆ ಹಾನಿಕಾರಕ: ರಾಕೇಶ್ ನರುಲಾ ಮಾತನಾಡಿ, "ಫಾಸ್ಟ್ಫುಡ್ನಲ್ಲಿ ಹೆಚ್ಚಿನ ಕೊಬ್ಬು, ಮೈದಾ ಹಿಟ್ಟು ಬಳಸುವುದರಿಂದ ಮನುಷ್ಯನ ಆರೋಗ್ಯಕ್ಕೆ ನಾನಾ ರೋಗಗಳಿಗೆ ಆಹ್ವಾನ ನೀಡುತ್ತದೆ. ಮೈದಾ ಹಿಟ್ಟು, ಕೊಬ್ಬು ಬಳಸದೆ ಫಾಸ್ಟ್ ಫುಡ್ ತಯಾರಿಸಬೇಕು. ಅದು ಜನರ ಆರೋಗ್ಯ ಕಾಪಾಡುವುದರೊಂದಿಗೆ ಆರೋಗ್ಯ ವೃದ್ಧಿಗೂ ಕಾರಣವಾಗಬೇಕು ಎನ್ನುವ ನಿಟ್ಟಿನಲ್ಲಿ ಮಿಲೆಟ್ಸ್ ಪಿಜ್ಜಾ ತಯಾರಿಸುವ ಯೋಚನೆ ಮಾಡಿದೆ. ನನ್ನ ಯೋಚನೆಗೆ ಸಾಥ್ ನೀಡಿದವರು ರೆಸ್ಟೋರೆಂಟ್ ಮಾಲೀಕ ಜಸ್ದೀಪ್ ಸಿಂಗ್. ಮಿಲೆಟ್ಸ್ನಿಂದ ತಯಾರಿಸಿದ ಪಿಜ್ಜಾವನ್ನು ಜನರು ಇಷ್ಟಪಟ್ಟಿದ್ದಾರೆ" ಎಂದರು.