ಅಮರಾವತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸ ಪಠಿಸುವ ಸವಾಲು ಹಾಕಿ ಜೈಲು ಸೇರಿದ್ದ ಸಂಸದೆ ನವನೀತ್ ಕೌರ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ 36 ದಿನಗಳ ಬಳಿಕ ತಮ್ಮ ಸ್ವಕ್ಷೇತ್ರ ಅಮರಾವತಿಗೆ ಬಂದಿದ್ದಾರೆ. ಹೀಗಾಗಿ ರಾಣಾ ದಂಪತಿಗೆ ಅವರ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ ಈ ದಂಪತಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಯಾವುದೇ ಅನುಮತಿ ಪಡೆಯದೇ ರ‍್ಯಾಲಿನಡೆಸಲಾಗಿದೆ ಎಂದು ಆರೋಪಿಸಿ ಶಾಸಕ ರವಿ ರಾಣಾ, ಸಂಸದೆ ನವನೀತ್ ಕೌರ್ ಮತ್ತು ನೂರಾರು ಕಾರ್ಯಕರ್ತರ ವಿರುದ್ಧ ಗಾಡ್ಗೆನಗರ ಮತ್ತು ರಾಜಾಪೇಟ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ಇತ್ತೀಚೆಗೆ ಧ್ವನಿವರ್ಧಕಗಳ ವಿಚಾರವಾಗಿ ರಾಣಾ ದಂಪತಿ ಮುಂಬೈನಲ್ಲಿರುವ ಸಿಎಂ ಉದ್ಧವ್ ಠಾಕ್ರೆ ಅವರ 'ಮಾತೋಶ್ರೀ' ನಿವಾಸದ ಮುಂದೆ ಹನುಮಾನ್ ಚಾಲೀಸ ಪಠಿಸುವ ಸವಾಲನ್ನು ಈ ದಂಪತಿ ಹಾಕಿದ್ದರು. ಅಂತೆಯೇ ಏಪ್ರಿಲ್ 23ರಂದು ಸಿಎಂ ಮನೆ ಬಳಿ ಬಂದಾಗ ಅವರನ್ನು ಬಂಧಿಸಲಾಗಿತ್ತು. ಅಲ್ಲಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದು, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು.