ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ) :ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರಗಾಮಿಯನ್ನು ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಗುರುವಾರ ಬಂಧಿಸಿವೆ. ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾರಾಮುಲ್ಲಾದ ಕ್ರೀರಿ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದವು. ತಪಾಸಣೆಯ ವೇಳೆ ನಾಕಾ ಪಾಯಿಂಟ್ ಕಡೆಗೆ ಬರುತ್ತಿದ್ದ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲನವಲನವನ್ನು ಗಮನಿಸಲಾಯಿತು. ಪೊಲೀಸರು ಮತ್ತು ಭದ್ರತಾ ಪಡೆ ಸಿಬ್ಬಂದಿಯನ್ನು ಕಂಡ ಶಂಕಿತ ಉಗ್ರ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ.
ತಕ್ಷಣವೇ ಎಚ್ಚೆತ್ತ ಭದ್ರತಾ ಪಡೆಗಳು ಆತನನ್ನು ಹಿಂಬಾಲಿಸಿ ಬಂಧಿಸಿವೆ. ಪ್ರಾಥಮಿಕ ವಿಚಾರಣೆಯ ವೇಳೆ ಆತ ನೌಪೋರಾ ವಾಗೂರ ಕ್ರೀರಿ ನಿವಾಸಿ ಅಬ್ದುಲ್ ಖಯೂಮ್ ಗನಿ ಎಂಬುವರ ಪುತ್ರ ಇಮ್ರಾನ್ ಅಹ್ಮದ್ ಗನಿ ಎಂದು ಗುರುತಿಸಲಾಗಿದೆ. ಬಳಿಕ ಆತನಿಂದ 1 ಚೈನೀಸ್ ಪಿಸ್ತೂಲ್, 1 ಪಿಸ್ತೂಲ್ ಮ್ಯಾಗಜೀನ್, 9 ಪಿಸ್ತೂಲ್ ರೌಂಡ್‌ಗಳು ಮತ್ತು 1 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಿಎಸ್ ಕ್ರೀರಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಈ ಹಿಂದಿನ ಕಾರ್ಯಾಚರಣೆ:ಈಚೆಗೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಮೂವರು ಉಗ್ರರ ಸಹಚರರನ್ನು ಬಂಧಿಸಲಾಗಿತ್ತು. ಅವರ ಬಳಿಯಿದ್ದ ಮದ್ದುಗುಂಡು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜುಲಾ ಕಾಲು ಸೇತುವೆ ಬಳಿಯ ಕಲ್ಗೈಯಲ್ಲಿ ತಪಾಸಣೆ ಮತ್ತು ಗಸ್ತು ತಿರುಗುತ್ತಿದ್ದಾಗ ಭದ್ರತಾ ಪಡೆಗಳು ಕಮಲ್‌ಕೋಟೆಯಿಂದ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಬ್ಯಾಗ್‌ಗಳನ್ನು ಹೊತ್ತು ಬರುತ್ತಿದ್ದ ಇಬ್ಬರು ಶಂಕಿತರನ್ನು ತಡೆದು ತಪಾಸಣೆ ನಡೆಸಿದ್ದು.
ಶೋಧ ಕಾರ್ಯದ ವೇಳೆ ಅವರ ಬಳಿ ಮೂರು ಚೀನಾದ ಗ್ರೆನೇಡ್‌ಗಳು ಮತ್ತು 2.5 ಲಕ್ಷ ರೂಪಾಯಿ ನಗದು ಪತ್ತೆಯಾಗಿತ್ತು. ಬಳಿಕ ಮೂವರನ್ನೂ ಬಂಧಿಸಲಾಗಿತ್ತು. ಮಡಿಯನ್ ಕಮಲಕೋಟೆ ನಿವಾಸಿಗಳಾದ ಝಮೀರ್ ಅಹ್ಮದ್ ಖಾಂಡೆ ಮತ್ತು ಮೊಹಮ್ಮದ್ ನಸೀಮ್ ಖಾಂಡೆ ಎಂದು ಗುರುತಿಸಲಾಗಿದೆ.
ಆರೋಪಿಗಳು ಅಕ್ರಮವಾಗಿ ಗ್ರೆನೇಡ್‌ಗಳನ್ನು ಪಡೆದುಕೊಂಡಿದ್ದು, ಭಯೋತ್ಪಾದಕ ಕೃತ್ಯ ಎಸಗಲು ಮಂಜೂರ್ ಅಹ್ಮದ್ ಭಟ್ಟಿ ಎಂಬಾತ ನಗದು ಹಣ ನೀಡಿದ್ದಾಗಿ ಬಾಯ್ಬಿಟ್ಟಿದ್ದರು. ಇದರ ಆಧಾರದ ಮೇಲೆ ಭಟ್ಟಿಯನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತ ಭಯೋತ್ಪಾದಕ ಕೃತ್ಯಕ್ಕೆ ಗ್ರೆನೇಡ್‌ಗಳು ಮತ್ತು ನಗದು ಪೂರೈಕೆ ಮಾಡಿದ್ದ ಹಾಗೂ ತನ್ನ ಮನೆಯ ಸಮೀಪದ ಸ್ಥಳದಲ್ಲೇ ಒಂದು ಹ್ಯಾಂಡ್ ಗ್ರೆನೇಡ್ ಮತ್ತು ಹಣವನ್ನು ಇಟ್ಟುಕೊಂಡಿದ್ದ ಕುರಿತ ಮಾಹಿತಿ ಹೊರಹಾಕಿದ್ದ.
ಇದನ್ನೂ ಓದಿ:ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಇಬ್ಬರು ಉಗ್ರರ ಹತ್ಯೆ