ಮುಂಬೈ: ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಭಾನುವಾರ ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳ ನಂತರ ಅವರು ಶಿವಸೇನೆ ಸೇರಿದ್ದಾರೆ. ಕೇಸರಿ ಧ್ವಜ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಮಿಲಿಂದ್ ದಿಯೋರಾ ಇಂದು (ಭಾನುವಾರ) ಬೆಳಿಗ್ಗೆಯಷ್ಟೇ ತಾವು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದರು. ಇದು ತಮ್ಮ ರಾಜಕೀಯ ಪ್ರಯಾಣದಲ್ಲಿ "ಮಹತ್ವದ ಅಧ್ಯಾಯವೊಂದರ ಮುಕ್ತಾಯ" ಎಂದು ಅವರು ಬಣ್ಣಿಸಿದ್ದರು.
ದಕ್ಷಿಣ ಮುಂಬೈನ ಮಾಜಿ ಲೋಕಸಭಾ ಸಂಸದರಾದ ದಿಯೋರಾ ಮಧ್ಯಾಹ್ನ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ವರ್ಷಾದಲ್ಲಿ ನಡೆದ ಸಮಾರಂಭದಲ್ಲಿ ಆಡಳಿತಾರೂಢ ಶಿಂಧೆ ಶಿವಸೇನಾಗೆ ಸೇರಿದರು. ಕಾಂಗ್ರೆಸ್ನಲ್ಲಿರುವ ದಿಯೋರಾ ಅವರ ಹಲವಾರು ಬೆಂಬಲಿಗರು ಕೂಡ ಇಷ್ಟರಲ್ಲೇ ಆಡಳಿತಾರೂಢ ಶಿವಸೇನೆಗೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
"ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದರ ಅಂತ್ಯವಾಗಿದೆ. ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸುವ ಮೂಲಕ ನಾನು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಹಲವು ವರ್ಷಗಳಿಂದ ಅಚಲ ಬೆಂಬಲ ನೀಡಿದ ಎಲ್ಲಾ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ದಿಯೋರಾ ಭಾನುವಾರ ಬೆಳಿಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದರು.
ಈ ಹಿಂದೆ ತಾವು ಪ್ರತಿನಿಧಿಸುತ್ತಿದ್ದ ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರಕ್ಕೆ ಶಿವಸೇನೆ (ಯುಬಿಟಿ) ಹಕ್ಕು ಸಾಧಿಸಿದ ನಂತರ ಕಳೆದ ಕೆಲವು ದಿನಗಳಿಂದ ದಿಯೋರಾ ಅಸಮಾಧಾನಗೊಂಡಿದ್ದರು. ಆದಾಗ್ಯೂ, 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಅವರು ಅವಿಭಜಿತ ಶಿವಸೇನೆಯ ಅರವಿಂದ್ ಸಾವಂತ್ ಅವರ ಎದುರು ಪರಾಭವಗೊಂಡಿದ್ದರು. ಸದ್ಯ ಸಾವಂತ್ ಠಾಕ್ರೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ ಮತ್ತು ಮಹಾ ವಿಕಾಸ್ ಅಘಾಡಿಯ ಭಾಗವಾಗಿ ಠಾಕ್ರೆ ಬಣ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ದಿಯೋರಾ ಅವರ ರಾಜೀನಾಮೆ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಪ್ರಧಾನಿ ಮೋದಿ ಇದನ್ನು ನಿರ್ಧರಿಸಿದ್ದಾರೆ, ಇದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, "ನಾನು ಏನು ಹೇಳಲಿ? ಯಾರಾದರೂ ಪಕ್ಷ ತೊರೆಯಲು ಬಯಸಿದರೆ ಹಾಗೆ ಮಾಡಲು ಅವರು ಸ್ವತಂತ್ರರು. ನಾನು ಅವರನ್ನು ಕಳೆದ ಬಾರಿ ನಾಗ್ಪುರದಲ್ಲಿ ಭೇಟಿಯಾಗಿದ್ದೆ ಮತ್ತು ನಮ್ಮ ಮಧ್ಯೆ ಉತ್ತಮವಾದ ಚರ್ಚೆ ನಡೆದಿತ್ತು" ಎಂದರು.
ಇದನ್ನೂ ಓದಿ : ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಮಾಜಿ ಸಂಸದ ಮಿಲಿಂದ್ ದಿಯೋರಾ