ಜೈಪುರ (ರಾಜಸ್ಥಾನ):ದಲಿತರ ಮೇಲಿನ ದೌರ್ಜನ್ಯದಿಂದ ನೊಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಪಾನಾ ಚಂದ್ ಮೇಘ್ವಾಲ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ತಮ್ಮ ಸಮುದಾಯವನ್ನು ರಕ್ಷಿಸಲು ಸಾಧ್ಯವಾಗದೇ ಇದ್ದರೆ ನಾನು ಶಾಸಕನಾಗಿ ಮುಂದುವರೆಯುವ ಅರ್ಹತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಜಾಲೋರ್ನಲ್ಲಿ ಮಡಕೆಯಲ್ಲಿದ್ದ ನೀರು ಕುಡಿದ ಕಾರಣಕ್ಕೆ 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕ ಥಳಿಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇದಾದ ಎರಡು ದಿನಗಳಲ್ಲಿ ಬರನ್-ಆತು ಕ್ಷೇತ್ರದ ಶಾಸಕರಾದ ಮೇಘ್ವಾಲ್ ಈ ನಿರ್ಧಾರ ಪ್ರಕಟಿಸಿದರು.
ನನ್ನ ಆತ್ಮಸಾಕ್ಷಿಯ ಮಾತು ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾವುದೇ ಹುದ್ದೆ ಇಲ್ಲದೆಯೇ ಸಮಾಜದ ಸೇವೆ ಮಾಡುತ್ತೇನೆ. ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ದೌರ್ಜನ್ಯಗಳನ್ನು ನೋಡಿ ನನಗೆ ನೋವಾಗಿದೆ. ನನ್ನ ಸಮುದಾಯವನ್ನು ಹಿಂಸಿಸುತ್ತಿರುವ ರೀತಿಯನ್ನು ನನ್ನ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದೂ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.