ಕೋಲ್ಕತ್ತಾ(ಪಚ್ಚಿಮ ಬಂಗಾಳ): ಕಳೆದ ವರ್ಷ ಮಾರ್ಚ್ನಲ್ಲಿ ದೇಶ ವ್ಯಾಪಿ ಸುದ್ದಿಯಲ್ಲಿದ್ದ ರಾಮ್‌ಪುರಹತ್‌ನ ಬೊಗ್ಟುಯಿ ಗ್ರಾಮ, ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ, ಬೊಗ್ಟುಯಿ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ನೀಡಿದ ಪರಿಹಾರದ ಹಣದ ಬಗ್ಗೆ ಬಂಗಾಳದ ಆಡಳಿತ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷದ ನಡುವೆ ಜಟಾಪಟಿ ನಡೆಯುತ್ತಿದೆ. ಬೊಗ್ಟುಯಿ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿದ ಪರಿಹಾರವು, ಕೇಂದ್ರ ಸರ್ಕಾರ ಅಕ್ಷರ ದಾಸೋಹ ನಿಧಿಗೆ ಮೀಸಲಿಟ್ಟ ಹಣವನ್ನು, ರಾಜ್ಯ ಸರ್ಕಾರ ಖರ್ಚು ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಬಿಜೆಪಿಯ ಬಿರ್ಭುಮ್ ಜಿಲ್ಲಾಧ್ಯಕ್ಷ ಧ್ರುವ ಸಾಹಾ ಅವರು ಬೊಗ್ಟುಯಿ ಘಟನೆಯಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಸುಮಾರು 67 ಲಕ್ಷ ಹಣವನ್ನು ಅಕ್ಷರ ದಾಸೋಹ ನಿಧಿಯಿಂದ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಭದು ಶೇಖ್ ಹತ್ಯೆ ಪ್ರಕರಣ: ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಸ್ಥಳೀಯ ಪಂಚಾಯತ್‌ನ ಉಪ ಮುಖ್ಯಸ್ಥ ಭದು ಶೇಖ್ ಅವರನ್ನು ಮಾರ್ಚ್ 21 ರಂದು ಬಿರ್ಭೂಮ್‌ನ ರಾಮ್‌ಪುರಹತ್‌ನ ಬೊಗ್ಟುಯಿ ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು. ಆ ಘಟನೆಯ ನಡೆದ ಕೆಲವು ಗಂಟೆಗಳ ನಂತರ, ಬೊಗ್ಟುಯಿ ಗ್ರಾಮದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು, ಆ ಬೆಂಕಿಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದರು.
ಭದು ಶೇಖ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಆ ಹತ್ತು ಮಂದಿಯನ್ನು ಸುಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಯ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೊಗ್ಟುಯಿ ಗ್ರಾಮಕ್ಕೆ ತೆರಳಿ ಸಂತ್ರಸ್ತರ ಕುಟುಂಬಗಳಿಗೆ 7 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದರು. ಇದಾದ ಕೆಲವೇ ದಿನಗಳಲ್ಲಿ, ರಾಮ್‌ಪುರಹತ್ ನಂ.ಒನ್ ಬಿಡಿಒ ದೀಪಾನ್ವಿತಾ ಬರ್ಮನ್ ಸಹಿ ಮಾಡಿದ ಚೆಕ್ ಅನ್ನು ಬೊಗ್ಟುಯಿ ಘಟನೆಯ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.
ಇದಲ್ಲದೇ, ರಾಮ್‌ಪುರಹತ್‌ನ ಪರ್ಕಂಡಿಯ ಏಳು ಕೃಷಿ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗ ಮೃತರ ಕುಟುಂಬಕ್ಕೆ 2 ಲಕ್ಷ ರೂ.ಧನ ಸಹಾಯ ನೀಡಲಾಗಿತ್ತು. ರಾಜ್ಯ ಸರ್ಕಾರ ಈ ಪರಿಹಾರವನ್ನು ಅಕ್ಷರ ದಾಸೋಹ ನಿಧಿಯಿಂದ ನೀಡಿದೆ ಎಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸುತ್ತಿವೆ.