ಕರ್ನಾಟಕ

karnataka

ETV Bharat / bharat

ಗಂಡ - ಹೆಂಡತಿ ಕಾಳಗದಿಂದ ವಿಮಾನದ ಮಾರ್ಗ ಬದಲು, ತುರ್ತು ಭೂಸ್ಪರ್ಶ!

Mid-air fight between husband and wife: ಗಂಡ ಮತ್ತು ಹೆಂಡತಿ ನಡುವೆ ಗಲಾಟೆ ಹಿನ್ನೆಲೆಯಲ್ಲಿ ಮ್ಯೂನಿಚ್ (ಜರ್ಮನಿ)ನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ಥಾನ್ಸ ವಿಮಾನವನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ.

Mid-air fight between husband and wife leads to emergency landing of flight in Delhi
ಗಂಡ - ಹೆಂಡತಿ ಕಾಳಗದಿಂದ ವಿಮಾನದ ಮಾರ್ಗ ಬದಲು, ತುರ್ತು ಭೂಸ್ಪರ್ಶ!

By ETV Bharat Karnataka Team

Published : Nov 29, 2023, 11:04 PM IST

ನವದೆಹಲಿ: ಮನೆಗಳಲ್ಲಿ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪತಿ-ಪತ್ನಿ ಮಧ್ಯೆ ಗಲಾಟೆ, ಜಗಳ ಸಾಮಾನ್ಯ ಎನ್ನಬಹುದು. ಆದರೆ, ವಿಮಾನದಲ್ಲೂ ಗಂಡ-ಹೆಂಡತಿ ನಡುವೆ ದಿಢೀರ್‌ ಕಾಳಗ ಏರ್ಪಟ್ಟು, ವಿಮಾನವನ್ನೇ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ವರದಿಯಾಗಿದೆ!.

ಹೌದು, ಮ್ಯೂನಿಚ್‌ನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪತಿ-ಪತ್ನಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ. ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಮ್ಯೂನಿಚ್ (ಜರ್ಮನಿ)ನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ಥಾನ್ಸ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣದ ಸಮಯದಲ್ಲಿ ದಂಪತಿಗಳ ನಡುವಿನ ಜಗಳವು ತೀವ್ರವಾಗಿ ಉಲ್ಬಣಗೊಂಡಿದೆ. ಇದು ವಿಮಾನ ಸಿಬ್ಬಂದಿಯನ್ನು ಸಂಕಷ್ಟದ ಸಿಲುಕಿಸಿದೆ.

ವಿಮಾನದ ಮಾರ್ಗ ಬದಲು: ಗಂಡ ಹಾಗೂ ಹೆಂಡತಿ ಮಧ್ಯೆ ವಾಗ್ವಾದ ವಿಕೋಪಕ್ಕೆ ಹೋಗಿ ಪತಿ ಹೆಚ್ಚು ಆಕ್ರಮಣಕಾರಿ ನಡವಳಿಕೆ ತೋರಿದ್ದಾನೆ. ಇದರಿಂದ ಪರಿಸ್ಥಿತಿ ತೀವ್ರಗೊಂಡಂತೆ, ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಆದರೆ, ಎಷ್ಟೇ ಶಾಂತಗೊಳಿಸಲು ಪ್ರಯತ್ನಿಸಿದರೂ ಸಿಬ್ಬಂದಿ ವಿಫಲರಾದರು. ಆದ್ದರಿಂದ ವಿಮಾನದ ಮಾರ್ಗವನ್ನೇ ಬದಲಿಸಲಾಗಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದತ್ತ ವಿಮಾನವನ್ನು ತಿರುಗಿಸಿದರು. ಸಹಾಯಕ್ಕಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್​ (Air Traffic Controllers-ATC) ಅನ್ನು ತಕ್ಷಣವೇ ವಿಮಾನ ಸಿಬ್ಬಂದಿ ಸಂಪರ್ಕಿಸಿ ತುರ್ತು ಲ್ಯಾಂಡಿಂಗ್​ಗೆ ಅನುಮತಿ ಪಡೆದರು.

ಸುರಕ್ಷಿತವಾಗಿ ವಿಮಾನ ಲ್ಯಾಂಡ್: ದೆಹಲಿ ವಿಮಾನ ನಿಲ್ದಾಣದ ವಾಯುಯಾನ ಭದ್ರತಾ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದಾರೆ. ಆದರೆ, ಪತಿ-ಪತ್ನಿ ನಡುವಿನ ವಾಗ್ವಾದದ ಹಿಂದಿನ ನಿರ್ದಿಷ್ಟ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಮತ್ತೊಂದೆಡೆ, ಆರಂಭದಲ್ಲಿ ಪಾಕಿಸ್ತಾನದ ಹತ್ತಿರದ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ಗಾಗಿ ಯತ್ನಿಸಲಾಗಿತ್ತು. ಯಾವುದೋ ಕಾರಣಗಳಿಗಾಗಿ ಅನುಮತಿಯನ್ನು ನಿರಾಕರಿಸಲಾಗಿತ್ತು. ಇದರ ಪರಿಣಾಮವಾಗಿ ವಿಮಾನವು ತನ್ನ ಹಾದಿಯನ್ನು ಬದಲಾಯಿಸಿತು ಎಂದು ವರದಿಯಾಗಿದೆ.

ಬಳಿಕ ತಕ್ಷಣವೇ ದೆಹಲಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್​​ಅನ್ನು ವಿಮಾನ ಸಿಬ್ಬಂದಿ ಸಂಪರ್ಕಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತು​. ಪತ್ನಿಯೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ ಪ್ರಯಾಣಿಕನನ್ನು (ಪತಿ) ವಿಮಾನದಿಂದ ಕೆಳಗಿಳಿಸಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಸದ್ಯಕ್ಕೆ, ಲುಫ್ಥಾನ್ಸ ಏರ್‌ಲೈನ್ಸ್ ತುರ್ತು ಭೂಸ್ಪರ್ಶ ಹಾಗೂ ಈ ಘಟನೆಯ ಕುರಿತು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸಿಲ್ಲ.

ಇದನ್ನೂ ಓದಿ:ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶ: ಮಹಿಳೆಯ ವಿರುದ್ಧ ಪ್ರಕರಣ

ABOUT THE AUTHOR

...view details