ಮುಂಬೈ (ಮಹಾರಾಷ್ಟ್ರ):ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಜಾಗತಿಕ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರಿಂದು ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಚೇರಿಗೆ ಭೇಟಿ ನೀಡಿ, ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ಬಗ್ಗೆ ಆರ್ಬಿಐ ಟ್ವೀಟ್ ಮಾಡಿದ್ದು, ಬಿಲ್ ಗೇಟ್ಸ್ ಭೇಟಿ ಕೊಟ್ಟು ಗವರ್ನರ್ ಶಕ್ತಿಕಾಂತ ದಾಸ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು ಎಂದು ತಿಳಿಸಿದೆ. ಮತ್ತೊಂದೆಡೆ, ಶಕ್ತಿಕಾಂತ್ ದಾಸ್ ಕೂಡ ಟ್ವೀಟಿಸಿ, ಬಿಲ್ ಗೇಟ್ಸ್ ಅವರೊಂದಿಗೆ ಮಹತ್ವದ ಸಭೆ ನಡೆಯಿತು. ಹಣಕಾಸು, ಪಾವತಿ ವ್ಯವಸ್ಥೆಗಳು, ಕಿರು ಬಂಡವಾಳ ಹಾಗೂ ಡಿಜಿಟಲ್ ಸಾಲ ನೀಡುವಿಕೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ಪ್ರವಾಸದಲ್ಲಿ ಬಿಲ್ ಗೇಟ್ಸ್: ಆರ್ಬಿಐ ಕಚೇರಿಗೆ ಭೇಟಿ, ಮಹತ್ವದ ಮಾತುಕತೆ - ಭಾರತದ ಪ್ರವಾಸದಲ್ಲಿ ಬಿಲ್ ಗೇಟ್ಸ್
ಭಾರತದ ಪ್ರವಾಸದಲ್ಲಿರುವ ಬಿಲ್ ಗೇಟ್ಸ್ ಇಂದು ಮುಂಬೈನಲ್ಲಿ ಆರ್ಬಿಐ ಕಚೇರಿಗೆ ಭೇಟಿ ಕೊಟ್ಟರು.
ಬಿಲಿಯನೇರ್ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಉದಾರ ದಾನ ನೀಡುವ ಬಿಲ್ ಗೇಟ್ಸ್, ಇತ್ತೀಚೆಗೆ ಭಾರತದಲ್ಲಿ ವ್ಯಾಪಾರ ಮತ್ತು ಇತರ ಚಟುವಟಿಕೆಗಳನ್ನು ನಡೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. ಭೂಮಿಯಲ್ಲಿರುವ ಇತರ ದೇಶಗಳಂತೆ ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ, ಆ ನಿರ್ಬಂಧದ ಹೊರತಾಗಿಯೂ ಜಗತ್ತು ಇನ್ನೂ ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಭಾರತ ನಮಗೆ ತೋರಿಸಿದೆ ಎಂದು ಗೇಟ್ಸ್ ಸೋಮವಾರ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.