ನ್ಯೂಯಾರ್ಕ್: ಮೈಕ್ರೊಸಾಫ್ಟ್ ಕಂಪನಿಯ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕಂಪನಿಯ ಆಡಳಿತ ಮಂಡಳಿಯ ಸದಸ್ಯನಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು 2020ರಲ್ಲಿ ಮೈಕ್ರೊಸಾಫ್ಟ್ ಕಾರ್ಪ್ ಆಡಳಿತ ಮಂಡಳಿ ನಿರ್ಧರಿಸಿತ್ತು. ಬಿಲಿಯನೇರ್ ಬಿಲ್ ಗೇಟ್ಸ್ ಒಂದು ಕಾಲದಲ್ಲಿ ತಮ್ಮದೇ ಕಂಪನಿಯ ಮಹಿಳಾ ಸಿಬ್ಬಂದಿ ಓರ್ವಳೊಂದಿಗೆ ಪ್ರೀತಿಯ ಸಂಬಂಧ ಇಟ್ಟುಕೊಂಡಿದ್ದು, ಇದರ ಬಗ್ಗೆ ಕಂಪನಿಯ ಆಡಳಿತ ಮಂಡಳಿಯೇ ತನಿಖೆ ಮಾಡಿದ್ದರಿಂದ ಗೇಟ್ಸ್ ಆಡಳಿತ ಮಂಡಳಿಯಲ್ಲಿ ಮುಂದುವರಿಯ ಕೂಡದು ಎಂದು ನಿರ್ಧರಿಸಲಾಗಿತ್ತು. ಈ ಕುರಿತು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ಸುದ್ದಿಯೊಂದನ್ನು ಪ್ರಕಟಿಸಿದೆ.
ಮೈಕ್ರೊಸಾಫ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಇಂಜಿನಿಯರ್ ಓರ್ವಳು, ಗೇಟ್ಸ್ ಅವರೊಂದಿಗೆ ತಾನು ಹಲವಾರು ವರ್ಷಗಳಿಂದ ಲೈಂಗಿಕ ಸಂಬಂಧ ಹೊಂದಿರುವುದಾಗಿ ಪತ್ರ ಬರೆದಿದ್ದಳು. ಈ ವಿಷಯದ ಕುರಿತು ತನಿಖೆ ನಡೆಸುತ್ತಿದ್ದ ಆಡಳಿತ ಮಂಡಳಿ ಸದಸ್ಯರು 2019ರ ಕೊನೆಯ ಭಾಗದಲ್ಲಿ ಕಾನೂನು ಸಲಹಾ ಸಂಸ್ಥೆಯೊಂದನ್ನು ಸಹ ನೇಮಿಸಿಕೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಲೈಂಗಿಕ ಪ್ರಕರಣದ ತನಿಖೆ ಮುಗಿಯುವ ಮುನ್ನವೇ ಗೇಟ್ಸ್ ಕಂಪನಿಯಿಂದ ಹೊರನಡೆದಿದ್ದರು ಎಂದು ಈ ವಿಷಯಗಳ ಬಗ್ಗೆ ಮಾಹಿತಿ ಇದ್ದ ನಂಬಲರ್ಹ ವ್ಯಕ್ತಿಯೊಬ್ಬರು ಹೇಳಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.