ಪಣಜಿ (ಗೋವಾ): ಗೋವಾ ಅಧಿಕಾರಿಗಳು ಕರ್ನಾಟಕಕ್ಕೆ ಬಂದಾಗ ಅವರನ್ನು ನಿಂದಿಸಲಾಗಿದೆ ಮತ್ತು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರೋಪಿಸಿ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮುಖ್ಯಸ್ಥ ವಿಜಯ್ ಸರ್ದೇಸಾಯಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಮಹದಾಯಿ ನದಿ ವಿವಾದ ವಿಚಾರವಾಗಿ ಪರಿಶೀಲನೆ ನಡೆಸಲು ಜಂಟಿ ಪರಿಶೀಲನಾ ತಂಡ ಕರ್ನಾಟಕಕ್ಕೆ ಭೇಟಿ ನೀಡಿತ್ತು. ಈ ವೇಳೆ ನಡೆದ ಮೌಖಿಕ ನಿಂದನೆ ಮತ್ತು ಕರ್ನಾಟಕ ಪೊಲೀಸರು ವಿಧಿಸಿದ ನಿರ್ಬಂಧಗಳ ಬಗ್ಗೆ ಸ್ಪಷ್ಟಪಡಿಸುವಂತೆ ಅವರು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ವಿಧಾನಸಭಾ ಚುನಾವಣೆ: ಕೇರಳಕ್ಕೆ ಆಗಮಿಸಲಿದೆ ಸ್ಟಾರ್ ನಾಯಕರು ದಂಡು
"2021 ರ ಫೆಬ್ರವರಿ 22 ರಂದು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಪರಿಶೀಲನಾ ತಂಡ ಪರಿಶೀಲಿಸುವಂತೆ ಭಾರತದ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ 2021 ರ ಮಾರ್ಚ್ 19 ರಂದು ಮಹದಾಯಿ ಪರಿಶೀಲನೆಗೆ ತೆರಳಿದ ಗೋವಾ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರು ತಡೆಯೊಡ್ಡಿದರು. ಗೋವಾ ಅಧಿಕಾರಿಗಳಿಗೆ ಕಳಸಾ ಪ್ರಾಜೆಕ್ಟ್ ಸೈಟ್‌ಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು." ಎಂದು ಸರ್ದೇಸಾಯಿ ಪತ್ರದಲ್ಲಿ ಹೇಳಿದ್ದಾರೆ.
"ಆದರೆ ಗೋವಾ ನಿಯೋಗವನ್ನು ಕರ್ನಾಟಕ ಪೊಲೀಸರು ನಿರ್ಬಂಧಿಸಿರುವುದು ಸುಪ್ರೀಂ ಕೋರ್ಟ್ ಆದೇಶದ ಸಂಪೂರ್ಣ ಉಲ್ಲಂಘನೆಯಾಗಿದೆ. ಜಂಟಿ ತಪಾಸಣೆ ನಡೆಸುತ್ತಿರುವಾಗ ಗೋವಾ ಅಧಿಕಾರಿಗಳನ್ನು ಕಳಸಾ ಯೋಜನೆಯ ಹೊರಗೆ ಕಾಯುವಂತೆ ಮಾಡಲಾಯಿತು. ಅವರ ಐಡಿಗಳನ್ನು ಕರ್ನಾಟಕ ಪೊಲೀಸರು ವಶಪಡಿಸಿಕೊಂಡರು. ನಂತರ ಅದನ್ನು ನಮ್ಮ ಗೋವಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದು ಅಧಿಕಾರ ಮತ್ತು ಜವಾಬ್ದಾರಿಯ ದುರುಪಯೋಗವಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಇದನ್ನು ಮಾಡಲಾಗುತ್ತಿರುವುದರಿಂದ ಜಂಟಿ ತಪಾಸಣಾ ಸಮಿತಿಗೆ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಬೇಕು" ಎಂದು ಸರ್ದೇಸಾಯಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.