ನವದೆಹಲಿ: ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದು ಗುಜರಾತ್, ರಾಜಸ್ಥಾನ, ಛತ್ತೀಸ್‌ಗಢ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್, ಜೈನರು ಮತ್ತು ಬೌದ್ಧರಂತಹ ಮುಸ್ಲಿಮೇತರರಿಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಆಹ್ವಾನಿಸಿದೆ.
1955ರ ಪೌರತ್ವ ಕಾಯ್ದೆ ಅಡಿಯಲ್ಲಿ ಹಾಗೂ 2009 ರಲ್ಲಿ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳಡಿಯಲ್ಲಿ ತ್ವರಿತವಾಗಿ ಈ ಆದೇಶವನ್ನು ಅನುಷ್ಠಾನಗೊಳಿಸಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಆದರೆ ಈ ಆದೇಶವು 2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: COVID-19: ವಿಮಾನ ಟಿಕೆಟ್ ದರ ಹೆಚ್ಚಿಸಿದ ಕೇಂದ್ರ ಸರ್ಕಾರ
ಸಿಎಎ ಅಡಿಯಲ್ಲಿ ಸರ್ಕಾರ ಇನ್ನೂ ನಿಯಮಗಳನ್ನು ರೂಪಿಸಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ 2015 ಕ್ಕಿಂತ ಮೊದಲು ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧಾರ್ಮಿಕ ವಿಚಾರಕ್ಕೆ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ದೇಶಾದ್ಯಂತ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೂ 2020 ಡಿಸೆಂಬರ್‌ನಲ್ಲಿ ಸಿಎಎ ಅಂಗೀಕರಿಸಲ್ಪಟ್ಟಿತು.
ಇದೀಗ 1955ರ ಪೌರತ್ವ ಕಾಯ್ದೆ ಅಡಿಯಲ್ಲಿ ಗುಜರಾತ್ನ ಮೊರ್ಬಿ, ರಾಜ್‌ಕೋಟ್, ಪಟಾನ್ ಮತ್ತು ವಡೋದರಾ, ಛತ್ತೀಸ್‌ಗಢದ ದುರ್ಗ್ ಮತ್ತು ಬಲೋದಬಜಾರ್, ರಾಜಸ್ಥಾನದ ಜಲೋರ್, ಉದಯಪುರ, ಪಾಲಿ, ಬಾರ್ಮರ್, ಸಿರೋಹಿ, ಹರಿಯಾಣದ ಫರಿದಾಬಾದ್ ಹಾಗೂ ಪಂಜಾಬ್‌ನ ಜಲಂಧರ್ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.