ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಕೋಮು ಹಿಂಸಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು(ಎಂಎಚ್ಎ) ಇಂದು, ಹನುಮ ಜಯಂತಿಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ನಾಳೆ ನಡೆಯಲಿರುವ ಹನುಮ ಜಯಂತಿಗೆ ಈಗಾಗಲೇ ಭರ್ಜರಿ ತಯಾರಿ ಜರುಗುತ್ತಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಖಚಿತಪಡಿಸಬೇಕು ಎಂದು ಸಚಿವಾಲಯದ ವಕ್ತಾರರು ತಿಳಿಸಿದರು.
ಶಾಂತಿಯುತವಾಗಿ ಹನುಮ ಜಯಂತಿ ಆಚರಿಸಲು ಸಲಹೆ:"ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಅಂಶಗಳ ಮೇಲ್ವಿಚಾರಣೆಯನ್ನು ಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ಪ್ರೋತ್ಸಾಹಿಸಲಾಗುತ್ತದೆ" ಎಂದು ವಕ್ತಾರರು ಹೇಳಿದರು. ಹಿಂಸಾಚಾರದಲ್ಲಿ ತೊಡಗಿರುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಯುಟಿಗಳಿಗೆ ತಿಳಿಸಲಾಗಿದೆ.
ಗೃಹ ಸಚಿವಾಲಯದಲ್ಲಿ ಭದ್ರತಾ ಪರಿಶೀಲನಾ ಸಭೆ: ಮಂಗಳವಾರ ತಡರಾತ್ರಿ ಗೃಹ ಸಚಿವಾಲಯದಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯ ನಂತರ, ಈ ಸಲಹೆಯನ್ನು ನೀಡಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ. ರಾಮನವಮಿ ಮೆರವಣಿಗೆ ವೇಳೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಬಗ್ಗೆ ಗೃಹ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಚರ್ಚೆ:ಗೃಹ ಸಚಿವಾಲಯವು ರಾಜ್ಯ ಆಡಳಿತಗಳಿಗೆ ಮತ್ತು ಭದ್ರತಾ ಏಜೆನ್ಸಿಗಳಿಗೆ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಮೇಲೆ ಸರಿಯಾದ ನಿಗಾ ಇರಿಸುವಂತೆ ತಿಳಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು, ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಕೇಂದ್ರ ಅರೆಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ನಾರ್ತ್ ಬ್ಲಾಕ್‌ನಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಹಾಗೂ ಗುಜರಾತ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಿಹಾರ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ಅರೆಸೇನಾ ಪಡೆಗಳನ್ನು ಕಳುಹಿಸುವುದರ ಜೊತೆಗೆ, ಎಂಎಚ್ಎ ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ರಾಜ್ಯ ಸರ್ಕಾರದಿಂದ ವಿವರವಾದ ವರದಿ ಕೇಳಿದೆ.
ಕೋಲ್ಕತ್ತಾ ಹೈಕೋರ್ಟ್ ಎಚ್ಚರಿಕೆ:ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದಂತಹ ಅಶಾಂತಿ ಪುನರಾವರ್ತನೆಯಾಗದಂತೆ ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ. ಗುರುವಾರ ನಡೆಯಲಿರುವ ರಾಜ್ಯದ ಎಲ್ಲಾ ಹನುಮ ಜಯಂತಿ ಮೆರವಣಿಗೆಗಳಿಗೆ ರಾಜ್ಯ ಪೊಲೀಸರು ಮತ್ತು ಕೇಂದ್ರ ಪಡೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಆದೇಶಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.