ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ದುರಸ್ತಿಗೆ ಮಾಡಿರುವ ವೆಚ್ಚದ ಕುರಿತು ಸಿಎಜಿ ಆಡಿಟ್ ನಡೆಸಲಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅವರ ಶಿಫಾರಸಿನ ಮೇರೆಗೆ ಸಿಎಜಿ ವಿಶೇಷ ಆಡಿಟ್‌ಗೆ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್ 24 ಮೇ 2023 ರಂದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು, ಮುಖ್ಯಮಂತ್ರಿಯವರ ಮನೆಯ ದುರಸ್ತಿಗೆ ಮಾಡಿದ ವೆಚ್ಚದಲ್ಲಿ ಗಂಭೀರವಾದ ಹಣಕಾಸಿನ ಅಕ್ರಮಗಳು ನಡೆದಿವೆ ಮತ್ತು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.
ಯಾವೆಲ್ಲ ವಿಚಾರದಲ್ಲಿ ಅಕ್ರಮಗಳು ನಡೆದಿವೆ ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಏಪ್ರಿಲ್ 27ರಂದು ಲೆಪ್ಟಿನೆಂಟ್ ಗವರ್ನರ್ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ 45 ಕೋಟಿ ರೂಪಾಯಿಗಳ ನವೀಕರಣ ಕಾಮಗಾರಿ ನಡೆಸಲಾಗಿದೆ, ಮುಖ್ಯಮಂತ್ರಿಗಳು ಸಾರ್ವಜನಿಕರ ಹಣವನ್ನು ನವೀಕರಣಕ್ಕೆ ಬಳಸುತ್ತಿದ್ದಾರೆ ಎಂದು ಬಿಜೆಪಿಯು ಆಪ್ ಮತ್ತು ಸಿಎಂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿತ್ತು.
ಕೇಜ್ರಿವಾಲ್ ಅವರು ತಮ್ಮ ಮನೆಗೆ ಡಿಯರ್ ಪಾಲಿಶ್, ವಿಯೆಟ್ನಾಂ ಮಾರ್ಬಲ್, ದುಬಾರಿ ಪರದೆಗಳು ಮತ್ತು ಅತ್ಯಾಧುನಿಕ ಕಾರ್ಪೆಟ್‌ಗಳಂತಹ ಅತಿರಂಜಿತ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಸಿಎಂ ಬಳಸಿದ ತಮ್ಮ ಪ್ರಾಮಾಣಿಕತೆ ಮತ್ತು ಸರಳತೆಗಳನ್ನೇ ಈಗ ಅವರು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಆರೋಪಿಸಿದ್ದರು. ಈ ವೇಳೆ ಎಎಪಿ ಸಿಎಂ ಅವರನ್ನು ಸಮರ್ಥಿಸಿಕೊಂಡಿತ್ತು. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಶಿಫಾರಸಿನ ಮೇರೆಗೆ ನವೀಕರಣ ಕೈಗೊಳ್ಳಲಾಗಿದೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದರು.