ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಇದರಿಂದಾಗಿ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಈ ಬೆದರಿಕೆಯ ನಂತರ ವಡೆತ್ತಿವಾರ್ ಅವರು ಈ ವಿಷಯವನ್ನು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ತಿಳಿಸಿದ್ದಾರೆ. ಭದ್ರತೆ ಹೆಚ್ಚಿಸುವಂತೆ ವಿಜಯ್ ವಡೆತ್ತಿವಾರ್ ಅವರು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ. ನಾಗ್ಪುರದಲ್ಲಿದ್ದಾಗ ವಿಜಯ್ ವಡೆತ್ತಿವಾರ್ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಯಾವ ಕಾರಣಕ್ಕೆ ಬೆದರಿಕೆ :ಈ ಮಧ್ಯೆ ಒಬಿಸಿಯಿಂದ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಜಾರಂಗೆ - ಪಾಟೀಲ್ ಬೇಡಿಕೆಗೆ ವಡೆತ್ತಿವಾರ್ ವಿರೋಧ ವ್ಯಕ್ತಪಡಿಸಿದ್ದರು. ಜಾರಂಗೆ - ಪಾಟೀಲ್ ಬಗ್ಗೆ ಮಾತನಾಡಿದ ನಂತರ ವಿಜಯ್ ವಡೆತ್ತಿವಾರ್ ಅವರಿಗೆ ಬೆದರಿಕೆಗಳು ಬಂದಿರುವ ಬಗ್ಗೆ ವರದಿಯಾಗಿದೆ. ಈ ಬೆದರಿಕೆ ಮೊಬೈಲ್‌ಗೆ ಬಂದಿದೆ. ಜಾರಂಗೆ-ಪಾಟೀಲ್ ಮರಾಠಾ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವಡೆತ್ತಿವಾರ್ ಟೀಕಿಸಿದ್ದಾರೆ. ಜಾರಂಗೆ-ಪಾಟೀಲ್ ಬಗ್ಗೆ ಹೇಳಿಕೆ ನೀಡಿದ ಬಳಿಕ ವಡೆತ್ತಿವಾರ್ ಅವರಿಗೆ ಬೆದರಿಕೆ ಕರೆ ಹಾಗೂ ಸಂದೇಶ ಬಂದಿದೆ.