ಮುಂಬೈ, ಮಹಾರಾಷ್ಟ್ರ:ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ಮುಂಬೈನ ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವವನ್ನು ಆಚರಿಸಲು ನಾನು ಹೊರಗೆ ಹೋಗಿದ್ದೆ. ಈ ವೇಳೆ ನನ್ನನ್ನುಸಾಂತಾಕ್ರೂಜ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನನ್ನನ್ನು ವಶಕ್ಕೆ ಪಡೆಯಲಾಗಿದೆ. ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವವನ್ನು ಆಚರಿಸಲು ನಾನು ಆಗಸ್ಟ್ 9 ರಂದು ಮನೆಯಿಂದ ಹೊರಟಿದ್ದೆ. ನನ್ನನ್ನು ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದರು. ಈ ಐತಿಹಾಸಿಕ ದಿನಾಂಕದಂದು ನನ್ನ ಮುತ್ತಜ್ಜ ಬಾಪು ಮತ್ತು ಬಾ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿರುವುದು ನನಗೆ ಹೆಮ್ಮೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವಿಟರ್‌ನಲ್ಲಿ ಬಳಕೆದಾರರಿಗೆ ಉತ್ತರಿಸಿದ ತುಷಾರ್, ಆಗಸ್ಟ್ ಕ್ರಾಂತಿ ಮೈದಾನಕ್ಕೆ ಶಾಂತಿಯುತ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ನನ್ನನ್ನು ನನ್ನ ಬೆಂಬಲಿಗರೊಂದಿಗೆ ವಶಕ್ಕೆ ಪಡೆಯಲಾಗಿದೆ. ವೈರಲ್ ಆಗ್ತಿರುವ ಫೋಟೋಗಳಲ್ಲಿ ತುಷಾರ್ ಗಾಂಧಿ ಜೊತೆ ಇತರರು ಬಸ್ಸಿನಲ್ಲಿ ಕುಳಿತುಕೊಂಡಿರುವುದು ಕಂಡು ಬಂದಿದೆ.