ಮುಂಬೈ(ಮಹಾರಾಷ್ಟ್ರ): ಹೃದಯಾಘಾತಕ್ಕೂಳಗಾಗಿದ್ದ ಎನ್‌ಸಿಪಿ ನಾಯಕ ಏಕನಾಥ್ ಖಡ್ಸೆ ಅವರನ್ನು ನಿನ್ನೆ ತಡರಾತ್ರಿ ಮುಂಬೈನ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಖಡ್ಸೆ ಅವರ ಆರೋಗ್ಯ ವಿಚಾರಿಸಿದರು.
ಮಾಹಿತಿಯ ಪ್ರಕಾರ, ಭಾನುವಾರ ಮಧ್ಯಾಹ್ನ, ಏಕನಾಥ್ ಖಡ್ಸೆ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಣಿಸಿಕೊಂಡಿತ್ತು. ತಕ್ಷಣ ಅವರನ್ನು ಜಲಗಾಂವ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಡ್ಸೆ ಅವರಿಗೆ ಹೃದಯಾಘಾತವಾಗಿದೆ ಎಂಬ ಮಾಹಿತಿ ತಿಳಿದ ಕೂಡಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಏಕನಾಥ್ ಖಡ್ಸೆ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಏಕನಾಥ್ ಖಡ್ಸೆ ಮೊದಲು ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕರಾಗಿದ್ದು, ಆ ಪಕ್ಷವನ್ನು ತೊರೆದು 2020ರಲ್ಲಿ ಎನ್‌ಸಿಪಿ ಸೇರಿದ್ದರು. ಅವರು 2022 ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು.
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ:ಇತ್ತೀಚಿಗೆ, ಹೃದಯದಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಕೆಲ ವರ್ಷಗಳಿಂದ ಮಂಡಿನೋವಿನಿಂದ ಬಳಲುತ್ತಿದ್ದ ಮಾಜಿ ಸಿಎಂ ಬೊಮ್ಮಾಯಿ ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯಕೀಯ ತಪಾಸಣೆ ಮಾಡುವಾಗ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೂ ಮುನ್ನ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಮೊಣಕಾಲು ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ, ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಮುಂದಾಗಿದ್ದರು. ಮಂಡಿ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಹೃದಯ ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು. ಹೃದಯ ಸಮಸ್ಯೆ ಕಾಣಿಸಿಕೊಳ್ಳದೇ ಇದ್ದರೂ ಪರೀಕ್ಷೆ ವೇಳೆ ಹೃದಯದಲ್ಲಿನ ರಂಧ್ರ ಪತ್ತೆಯಾಗಿದ್ದರಿಂದ ಮೊದಲು ಹೃದಯ ಶಸ್ತ್ರ ಚಿಕಿತ್ಸೆಗೆ ವೈದ್ಯರು ನಿರ್ಧರಿಸಿದ್ದರು.
ಬೊಮ್ಮಾಯಿ ಅವರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ವೈದ್ಯರು ಹೃದಯ ಚಿಕಿತ್ಸೆ ನಡೆಸಿದ್ದರು. ಹೃದಯದ ಬೈಪಾಸ್ ಸರ್ಜರಿ ನಡೆಸಲಾಗಿತ್ತು. ಹೃದಯ ಚಿಕಿತ್ಸೆ ಯಶಸ್ವಿಯಾಗಿದ್ದು, ಬೊಮ್ಮಾಯಿ ಅವರ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ತೊಂದರೆ ಇಲ್ಲ. ಹೃದಯದ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಸುಧಾರಣೆಯಾದ ಬಳಿಕ ಬೊಮ್ಮಾಯಿ ಅವರಿಗೆ ಮಂಡಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು.
ಇದನ್ನೂ ಓದಿ:ಡಾ.ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಮುಂದಿನ ತಿಂಗಳಿನಿಂದ 'ಹೃದಯ ಜ್ಯೋತಿ' ಯೋಜನೆ ಜಾರಿ