ಮುಂಬೈ : ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಗಾಳಿಪಟದ ಮಾಂಜಾ ದಾರವು ಕತ್ತಿಗೆಗೆ ಸಿಲುಕಿ ಪೊಲೀಸ್ ಕಾನ್ಸ್ಟೇಬಲ್ಒಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಸಮೀರ್ ಸುರೇಶ್ ಜಾಧವ್ (37) ಮೃತ ಪೊಲೀಸ್ ಸಿಬ್ಬಂದಿ.
ವರ್ಲಿಯ ಬಿಡಿಡಿ ಚಾಲಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಸಮೀರ್ ಜಾಧವ್ ಅವರನ್ನು ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಬೀಟ್ ಮಾರ್ಷಲ್ ಆಗಿ ನಿಯೋಜಿಸಲಾಗಿತ್ತು. ಸಮೀರ್ ಅವರು ಭಾನುವಾರ ಮಧ್ಯಾಹ್ನ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ವಕೋಲಾ ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಾರಿ ಬಂದ ಪತಂಗದ ದಾರವು ಗಂಟಲಿಗೆ ಸಿಕ್ಕಿಹಾಕಿಕೊಂಡಿದೆ. ಬಳಿಕ, ಕುತ್ತಿಗೆಯಿಂದ ರಕ್ತ ಬರುತ್ತಿದ್ದುದನ್ನು ಕಂಡು ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಇದನ್ನು ಕಂಡ ಚಾಲಕರೊಬ್ಬರು ದೂರದಲ್ಲಿ ಗಸ್ತಿನಲ್ಲಿದ್ದ ಖೇರವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಖೇರವಾಡಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಜಾಧವ್ ಅವರನ್ನು ಸಯಾನ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಜಾಧವ್ ಅವರ ಜೇಬಿನಲ್ಲಿದ್ದ ಗುರುತಿನ ಚೀಟಿಯಿಂದ ಗುರುತು ಪತ್ತೆ ಪಡೆದ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದರು.